ಮಾಹಿತಿ ಕಾಯಿದೆ ೨೦೦೫ರ ಅಡಿಯಲ್ಲಿ ಬೀದಿನಾಯಿಗಳ ಬಗ್ಗೆ ಬೃಹತ್ ಬೆಂಗಳೂರು ಮಹಾನಗರಪಾಲಿಕೆಯಿಂದ ನಾವು ಕೇಳಿದ ಪ್ರಶ್ನೆಗಳಿಗೆ ಉಪನಿರ್ದೇಶಕರು (ಪಶುಪಾಲನೆ), ಬೃಹತ್ ಬೆಂಗಳೂರು ಮಹಾನಗರಪಾಲಿಕೆ, ಇವರು ನೀಡಿದ ಉತ್ತರಗಳನ್ನು ಇಲ್ಲಿ ಒದಗಿಸಿದ್ದೇವೆ. ಮುಖ್ಯಾಂಶಗಳು ಹೀಗಿವೆ:
1. ಅಕ್ಟೋಬರ್-ನವೆಂಬರ್ ೨೦೦೪ರಲ್ಲಿ ನಡೆದ ೧೭ನೇ ಜಾನುವಾರು ಗಣತಿಯ ಪ್ರಕಾರ ಬೆಂಗಳೂರು ಮಹಾನಗರಪಾಲಿಕೆಯ ವ್ಯಾಪ್ತಿಯಲ್ಲಿ ೫೬೧೫೪ ಬೀದಿನಾಯಿಗಳಿದ್ದವು. ಆದರೆ, ೨೦೦೧-೦೨ರಿಂದ ಫೆಬ್ರವರಿ ೨೦೦೭ರವರೆಗೆ ಒಟ್ಟು ೧೫೭೨೪೬ ನಾಯಿಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆಯನ್ನು ನಡೆಸಲಾಗಿದೆ ಮತ್ತು ೪೨೯೮೨ ನಾಯಿಗಳನ್ನು ದಯಾಮರಣಕ್ಕೆ ಗುರಿಪಡಿಸಲಾಗಿದೆ! ಇವನ್ನು ಸೇರಿಸಿದರೆ, ಒಟ್ಟು ನಾಯಿಗಳ ಸಂಖ್ಯೆಯು ಎರಡು ಲಕ್ಷವನ್ನೂ ಮೀರುತ್ತದೆ! ಸಂತಾನಹರಣ ಶಸ್ತ್ರಚಿಕಿತ್ಸೆಯನ್ನು ನೀಡಲಾದ ಕೆಲವು ನಾಯಿಗಳನ್ನೇ ದಯಾಮರಣಕ್ಕೀಡುಮಾಡಲಾಯಿತೆಂದಾದರೂ ಸಹ, ಮೂರರಿಂದ ನಾಲ್ಕು ಪಟ್ಟು ಹೆಚ್ಚು ನಾಯಿಗಳು ಬೆಂಗಳೂರಿಗೆ ಎಲ್ಲಿಂದ ಬಂದವೆಂಬುದು ಸೋಜಿಗವೇ! ಅಲ್ಲದೆ, ಸಂತಾನಹರಣ ಶಸ್ತ್ರಚಿಕಿತ್ಸೆಗೊಳಗಾದ ನಾಯಿಗಳ ಪೈಕಿ ಎಷ್ಟು ಜೀವಂತವಿವೆ ಎಂಬ ಮಾಹಿತಿಯು ಬೆಂಗಳೂರು ಮಹಾನಗರಪಾಲಿಕೆಯ ಬಳಿಯಲ್ಲಿ ಲಭ್ಯವಿಲ್ಲ.
2. ೨೦೦೧-೦೨ರಿಂದ ಸೆಪ್ಟೆಂಬರ್ ೨೦೦೬ ರವರೆಗೆ ಒಟ್ಟು ರೂ. ೬,೦೨,೫೨,೬೬೩ನ್ನು ಬೀದಿನಾಯಿಗಳ ಸಂತಾನಹರಣ ಶಸ್ತ್ರಚಿಕಿತ್ಸೆಗಾಗಿ ಬೃಹತ್ ಬೆಂಗಳೂರು ಮಹಾನಗರಪಾಲಿಕೆಯು ವೆಚ್ಚ ಮಾಡಿದ್ದು ಒಟ್ಟು ರೂ. ೫,೮೪,೫೨,೬೬೩ನ್ನು ಬೀದಿನಾಯಿಗಳ ಸಂತಾನಹರಣ ಶಸ್ತ್ರಚಿಕಿತ್ಸೆಗಾಗಿ ಪ್ರಾಣಿದಯಾ ಸಂಘಗಳಿಗೆ ಒದಗಿಸಲಾಗಿದೆ. ಹತ್ತು ವಾರ್ಡ್ ಗಳಲ್ಲಿ ಸರಕಾರಿ ಪಶುವೈದ್ಯರೇ ಸಂತಾನಹರಣ ಶಸ್ತ್ರಚಿಕಿತ್ಸೆಯನ್ನು ನಡೆಸಿದ್ದಾರೆ. ಹಾಗಾದರೆ ಉಳಿದೆಡೆಗಳಲ್ಲಿ ಖಾಸಗಿಯವರೇಕೆ?
3. ೨೦೦೧-೦೨ರಿಂದ ಫೆಬ್ರವರಿ ೨೦೦೭ರವರೆಗೆ ಒಟ್ಟು ೧,೪೧,೬೯೪ ನಾಯಿಕಡಿತದ ಪ್ರಕರಣಗಳು ಬೆಂಗಳೂರು ಮಹಾನಗರಪಾಲಿಕೆಯ ಆಸ್ಪತ್ರೆಗಳಲ್ಲಿ ದಾಖಲಾಗಿವೆ.
4. ಬೀದಿನಾಯಿಗಳನ್ನು ಕೊಲ್ಲಬಾರದೆಂಬ ನಿರ್ಣಯವನ್ನು ಬೆಂಗಳೂರು ಮಹಾನಗರಪಾಲಿಕೆಯು ತೆಗೆದುಕೊಂಡದ್ದಿಲ್ಲ. ಬೀದಿನಾಯಿಗಳ ನಿಯಂತ್ರಣದ ಬಗ್ಗೆ ಮಹಾನಗರಪಾಲಿಕೆಯು ಕಾನೂನು ತಜ್ಞರ ಸಲಹೆಯನ್ನು ಪಡೆದ ಬಗ್ಗೆ ಮಾಹಿತಿಯಿಲ್ಲ ಹಾಗೂ ಸಂತಾನಹರಣ ಶಸ್ತ್ರಚಿಕಿತ್ಸೆಯನ್ನು ನಡೆಸುವ ಬಗ್ಗೆ ಸರಕಾರಿ ಪಶುವೈದ್ಯರ ಸಲಹೆಯನ್ನು ಪಡೆಯಲಾಗಿಲ್ಲ. ಹಾಗಾದರೆ, ಬೀದಿನಾಯಿಗಳನ್ನು ಕೊಲ್ಲದೆ, ಅವುಗಳನ್ನು ಸಂತಾನಹರಣ ಶಸ್ತ್ರಚಿಕಿತ್ಸೆಗೆ ಒಳಪಡಿಸಬೇಕೆಂಬ ನಿರ್ಣಯವನ್ನು ಯಾವಾಗ, ಯಾಕಾಗಿ ತೆಗೆದುಕೊಳ್ಳಲಾಯಿತು?
5. ಒಂದೂವರೆ ಲಕ್ಷಕ್ಕೂ ಮಿಕ್ಕಿ ನಾಯಿಗಳಿಗೆ ಸಂತಾನಹರಣ ಚಿಕಿತ್ಸೆಯನ್ನು ನಡೆಸಲಾಗಿದ್ದರೂ, ಸುಮಾರು ಅರುವತ್ತು ಸಾವಿರ ನಾಯಿಗಳಿಗಷ್ಟೇ ರೇಬೀಸ್ ಚುಚ್ಚುಮದ್ದನ್ನು ಹಾಕಲಾಗಿದೆ, ಈ ಸಂಖ್ಯೆಯ ಅರ್ಧದಷ್ಟು ನಾಯಿಗಳಿಗೆ ಮಾತ್ರ ಅದನ್ನು ಪುನರಾವರ್ತಿಸಲಾಗುತ್ತಿದೆ.
ವಿವರಗಳು ಇಲ್ಲಿವೆ:
೧. ಬೆಂಗಳೂರು ಮಹಾನಗರಪಾಲಿಕೆಯ ವ್ಯಾಪ್ತಿಯಲ್ಲಿ ಬೀದಿನಾಯಿಗಳ ಗಣತಿಯನ್ನು ನಡೆಸಲಾಗಿದೆಯೇ? ಆಗಿದ್ದರೆ ಅದನ್ನು ಯಾರು, ಯಾವಾಗ ನಡೆಸಿದರು, ಅದಕ್ಕೆ ತಗಲಿದ ವೆಚ್ಚವೆಷ್ಟು ಮತ್ತು ಅದನ್ನು ಮಹಾನಗರಪಾಲಿಕೆಯು ಭರಿಸಿದ್ದರೆ ಅದರ ವಿವರಗಳನ್ನು ಒದಗಿಸಿ.
ಉಪನಿರ್ದೇಶಕರು (ಪಶುಪಾಲನೆ), ಬೃಹತ್ ಬೆಂಗಳೂರು ಮಹಾನಗರಪಾಲಿಕೆ:
ಬೆಂಗಳೂರು ಮಹಾನಗರಪಾಲಿಕೆಯಲ್ಲಿ ಬೀದಿನಾಯಿಗಳ ಗಣತಿ ನಡೆಸಲಾಗಿದೆ. ಅದನ್ನು ಕರ್ನಾಟಕ ಸರ್ಕಾರದ ಪಶುಪಾಲನಾ ಇಲಾಖೆ ಅಕ್ಟೋಬರ್-ನವೆಂಬರ್ ೨೦೦೪ರಲ್ಲಿ ನಡೆಸಲಾದ ೧೭ನೇ ಜಾನುವಾರು ಗಣತಿಯ ಜೊತೆಯಲ್ಲಿ ಬೆಂಗಳೂರು ಸಿಟಿ ಸಾಕ್ಷರತಾ ಸಮಿತಿ, ಬೆಂ.ಮ.ಪಾಯ ವಿದ್ಯಾ ಇಲಾಖೆ, ಬೆಂ.ಮ.ಪಾಯ ಪಶುಪಾಲನಾ ಇಲಾಖೆ ಇವರ ಸಹಯೋಗದೊಂದಿಗೆ ನಡೆಸಿರುತ್ತದೆ. ಸದರಿ ಗಣತಿಯಲ್ಲಿ ಎಲ್ಲಾ ಜಾನುವಾರುಗಳು, ಕೃಷಿ ಉಪಕರಣಗಳು, ಮತ್ತು ಮೀನುಗಾರಿಕಾ ಉಪಕರಣಗಳು ಸೇರಿರುತ್ತವೆ. ಇದರಿಂದ ಬೀದಿನಾಯಿಗಳ ಗಣತಿಗೆ ವೆಚ್ಚವನ್ನು ಬೇರ್ಪಡಿಸಲಾಗುವುದಿಲ್ಲ. ಇದಕ್ಕೆ ತಗುಲಿರುವ ಒಟ್ಟು ವೆಚ್ಚ ರೂ. ೩೧,೯೧,೨೭೫.೦೦. ಇದನ್ನು ಮಹಾನಗರಪಾಲಿಕೆ ಭರಿಸಿರುವುದಿಲ್ಲ.
೨. ಬೆಂಗಳೂರು ಮಹಾನಗರಪಾಲಿಕೆಯ ವ್ಯಾಪ್ತಿಯಲ್ಲಿ ಇರುವ/ಇರಬಹುದಾದ ಬೀದಿನಾಯಿಗಳ ಸಂಖ್ಯೆಯೆಷ್ಟು?
ಬೃ.ಬೆಂ.ಮ. ಪಾಲಿಕೆ:
ಅಕ್ಟೋಬರ್-ನವೆಂಬರ್ ೨೦೦೩ರಲ್ಲಿ ನಡೆದ ೧೭ನೇ ಜಾನುವಾರು ಗಣತಿಯ ಪ್ರಕಾರ ಬೆಂಗಳೂರು ಮಹಾನಗರಪಾಲಿಕೆಯ ವ್ಯಾಪ್ತಿಯಲ್ಲಿ ೫೬೧೫೪ ಬೀದಿನಾಯಿಗಳಿರುತ್ತವೆ.
೩. ಬೆಂಗಳೂರು ಮಹಾನಗರಪಾಲಿಕೆಯ ವ್ಯಾಪ್ತಿಯಲ್ಲಿ ಬೀದಿನಾಯಿಗಳ ನಿಯಂತ್ರಣಕ್ಕೆ ಕಳೆದ ಹತ್ತು ವರ್ಷಗಳಲ್ಲಿ ಕೈಗೊಂಡಿರುವ ಕ್ರಮಗಳೇನು?
ಬೃ.ಬೆಂ.ಮ. ಪಾಲಿಕೆ:
೨೦೦೧ರಿಂದ ಎ.ಬಿ.ಸಿ. ರೂಲ್ (ಡಾಗ್ಸ್) ೨೦೦೧ರ ಪ್ರಕಾರ ಎ.ಬಿ.ಸಿ. ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
೪. ಬೆಂಗಳೂರು ಮಹಾನಗರಪಾಲಿಕೆಯ ವ್ಯಾಪ್ತಿಯಲ್ಲಿ ಬೀದಿನಾಯಿಗಳ ನಿಯಂತ್ರಣ ಕಾರ್ಯದಲ್ಲಿ ಯಾವುದೇ ಪ್ರಾಣಿ ದಯಾ ಸಂಘಟನೆಗಳನ್ನು ಒಳಗೊಳ್ಳಲಾಗಿದೆಯೇ? ಹಾಗಿದ್ದರೆ ಅಂತಹ ಸಂಸ್ಥೆಗಳ ಹೆಸರು, ಪೂರ್ಣ ವಿಳಾಸ, ಅವುಗಳ ಅಧಿಕೃತ ನೋಂದಾವಣೆಯ ವಿವರಗಳು; ಅವುಗಳ ಪದಾಧಿಕಾರಿಗಳ ಹೆಸರುಗಳು, ಪೂರ್ಣ ವಿಳಾಸ, ವಿದ್ಯಾರ್ಹತೆಗಳೇನು?
ಬೃ.ಬೆಂ.ಮ. ಪಾಲಿಕೆ:
ಬೆಂಗಳೂರು ಮಹಾನಗರಪಾಲಿಕೆಯ ವ್ಯಾಪ್ತಿಯಲ್ಲಿ ಬೀದಿನಾಯಿಗಳ ನಿಯಂತ್ರಣ ಕಾರ್ಯದಲ್ಲಿ ಈ ಕೆಳಕಂಡ ಪ್ರಾಣಿ ದಯಾ ಸಂಘಟನೆಗಳಿದ್ದು, ಹೆಸರು, ಮತ್ತು ಅವುಗಳ ವಿಳಾಸ ಮತ್ತು ನೋಂದಣಿ ಸಂಖ್ಯೆ ಈ ಕೆಳಕಂಡಂತಿವೆ:
೧. ಮೆ|ಕ್ಯೂಪಾ, ನಂ. ೨೫೭, ೧ನೇ ಅಡ್ಡ ರಸ್ತೆ, ಹೆಚ್.ಎ.ಎಲ್. ೨ನೇ ಹಂತ, ಇಂದಿರಾನಗರ, ಬೆಂಗಳೂರು ನೋಂದಣಿ ಸಂಖ್ಯೆ IV 603/91/92
೨. ಮೆ|ಕೃಪಾ ಲವಿಂಗ್ ಅನಿಮಲ್ಸ್, ದಾಸಪ್ಪ ಆಸ್ಪತ್ರೆಯ ಆವರಣ, ಎನ್. ಆರ್. ರಸ್ತೆ, ಬೆಂಗಳೂರು ನೋಂದಣಿ ಸಂಖ್ಯೆ KA 024/2001/AWO
೩. ಮೆ|ಕರುಣಾ ಅನಿಮಲ್ ವೆಲ್ ಫೇರ್ ಅಸೋಸಿಯೇಷನ್ ಆಫ್ ಕರ್ನಾಟಕ, ಕಸ್ತೂರಿಬಾ ರಸ್ತೆ ಬೆಂಗಳೂರು ನೋಂದಣಿ ಸಂಖ್ಯೆ KA 002/1966
೪. ಮೆ|ಅನಿಮಲ್ ರೈಟ್ಸ್ ಫಂಡ್, ನಂ ೧೪೪, ಗಿರಿನಗರ, ೧ನೇ ಫ಼ೇಸ್, ಬೆಂಗಳೂರು ನೋಂದಣಿ ಸಂಖ್ಯೆ KA 014/1999/AWO
ಪದಾಧಿಕಾರಿಗಳ ಹೆಸರುಗಳು, ಪೂರ್ಣ ವಿಳಾಸ, ವಿದ್ಯಾರ್ಹತೆ ಇವು ಕಛೇರಿಯಲ್ಲಿ ಲಭ್ಯವಿರುವುದಿಲ್ಲ.
೫. ಬೀದಿನಾಯಿಗಳ ನಿಯಂತ್ರಣ ಕಾರ್ಯದಲ್ಲಿ ಒಳಗೊಂಡಿರುವ ಪ್ರಾಣಿ ದಯಾ ಸಂಘಟನೆಗಳು ಅಥವಾ ಅವುಗಳ ಪದಾಧಿಕಾರಿಗಳು ಯಾ ಸದಸ್ಯರುಗಳಿಗೆ ಪ್ರಾಣಿಗಳ ವರ್ತನೆಗಳ ಬಗ್ಗೆ, ಅವುಗಳ ನಿಯಂತ್ರಣೋಪಾಯಗಳ ಬಗ್ಗೆ ಮತ್ತು ಪ್ರಾಣಿಗಳಿಂದ ಸಾರ್ವಜನಿಕರಿಗೆ ಆಗಬಹುದಾದ ತೊಂದರೆಗಳು ಮತ್ತು ಅವುಗಳು ಹರಡಬಹುದಾದ ರೋಗಗಳ ಬಗ್ಗೆ ಸಾಕಷ್ಟು ಮಾಹಿತಿ ಯಾ ಪರಿಣತಿಯಿದೆಯೇ ಮತ್ತು ಈ ಕುರಿತು ಮಹಾನಗರಪಾಲಿಕೆಯು ಪರಿಶೀಲಿಸಿದೆಯೇ?
ಬೃ.ಬೆಂ.ಮ. ಪಾಲಿಕೆ:
ಈ ಎಲ್ಲಾ ಸಂಸ್ಥೆಗಳು ಭಾರತ ಪ್ರಾಣಿ ಕಲ್ಯಾಣ ಮಂಡಳಿಯಿಂದ ನೊಂದಾಯಿತ ಸಂಸ್ಥೆಗಳಾಗಿರುವುದರಿಂದ ಇವರಿಗೆ ಈ ಬಗ್ಗೆ ಪರಿಣತಿ ಇರುತ್ತದೆ. ಬೃಹತ್ ಬೆಂಗಳೂರು ಮಹಾನಗರಪಾಲಿಕೆ ಬೀದಿನಾಯಿಗಳ ಸಂತಾನಹರಣ ಶಸ್ತ್ರ ಚಿಕಿತ್ಸೆ ಕಾರ್ಯಕ್ರಮಕ್ಕೆ ಸೀಮಿತಗೊಂಡು ಪರಿಶೀಲಿಸುತ್ತದೆ.
೬. ಬೀದಿನಾಯಿಗಳ ನಿಯಂತ್ರಣ ಕಾರ್ಯದಲ್ಲಿ ಸರಕಾರಿ ಪಶುವೈದ್ಯರ ಪಾತ್ರವೇನು, ಈ ಬಗ್ಗೆ ಅವರ ಅಭಿಪ್ರಾಯವನ್ನು ಮಹಾನಗರಪಾಲಿಕೆಯು ಪಡೆದಿದೆಯೇ ಮತ್ತು ಹಾಗಿದ್ದರೆ ಅವರು ವ್ಯಕ್ತಪಡಿಸಿರುವ ಅಭಿಪ್ರಾಯಗಳೇನು? ಅಂತಹ ಅಭಿಪ್ರಾಯಗಳಿದ್ದರೆ ಅವುಗಳ ಪ್ರತಿಯನ್ನು ಒದಗಿಸಿ
ಬೃ.ಬೆಂ.ಮ. ಪಾಲಿಕೆ:
ಬೆಂಗಳೂರು ನಗರದ ಹತ್ತು ವಾರ್ಡ್ ಗಳಲ್ಲಿ ಸರ್ಕಾರಿ ಪಶು ಆಸ್ಪತ್ರೆಯ ಸರ್ಕಾರಿ ಪಶುವೈದ್ಯರ ಸಹಯೋಗದೊಂದಿಗೆ ಎ.ಬಿ.ಸಿ. ಕಾರ್ಯಕ್ರಮ ನಡೆಸಲಾಗುತ್ತಿದೆ. ಇವರ ಅಭಿಪ್ರಾಯವನ್ನು ಮಹಾನಗರಪಾಲಿಕೆ ಪಡೆದಿರುವುದಿಲ್ಲ.
೭. ಬೀದಿನಾಯಿಗಳನ್ನು ಕೊಲ್ಲಬಾರದೆಂದು ಬೆಂಗಳೂರು ಮಹಾನಗರಪಾಲಿಕೆಯು ಅಥವಾ ಅದಕ್ಕೂ ಮೊದಲಿದ್ದ ಪುರಸಭೆಯು ಯಾವುದೇ ನಿರ್ಣಯಗಳನ್ನು ಕೈಗೊಂಡದ್ದಿದೆಯೇ? ಹಾಗಿದ್ದರೆ ಅದಕ್ಕೆ ಈ ದೇಶದ ಯಾವುದೇ ಕಾನೂನು/ನಿಯಮಗಳ ಆಧಾರವಿದೆಯೇ? ಈ ಬಗ್ಗೆ ಬೆಂಗಳೂರು ಮಹಾನಗರಪಾಲಿಕೆಯು ಯಾವುದೇ ಕಾನೂನು ಸಲಹೆಯನ್ನು ಪಡೆದಿದೆಯೇ, ಹಾಗಿದ್ದರೆ ಯಾವಾಗ, ಯಾರಿಂದ ಮತ್ತು ಅಂತಹ ಸಲಹೆಯು ಏನಾಗಿತ್ತು? ಈ ಎಲ್ಲಾ ಮಾಹಿತಿಗಳನ್ನೊಳಗೊಂಡ ದಾಖಲೆಗಳ ಪ್ರತಿಗಳನ್ನು ಒದಗಿಸಿ.
ಬೃ.ಬೆಂ.ಮ. ಪಾಲಿಕೆ:
ಬೀದಿನಾಯಿಗಳನ್ನು ಕೊಲ್ಲಬಾರದೆಂದು ಬೆಂಗಳೂರು ಮಹಾನಗರಪಾಲಿಕೆ ನಿರ್ಣಯವನ್ನು ಕೈಗೊಂಡಿರುವುದಿಲ್ಲ. ಬದಲಾಗಿ ೨೦೦೧ರಿಂದ ಎ.ಬಿ.ಸಿ. ರೂಲ್ (ಡಾಗ್ಸ್) ೨೦೦೧ರ ಪ್ರಕಾರ ಬೀದಿನಾಯಿಗಳ ಸಂತಾನಹರಣ ಶಸ್ತ್ರಚಿಕಿತ್ಸೆ ಕಾರ್ಯಕ್ರಮವನ್ನು ಹಮ್ಮಿಕೊಂಡಿರುತ್ತದೆ. (ಬೀದಿನಾಯಿಗಳ ಸಂತಾನಹರಣ ಶಸ್ತ್ರಚಿಕಿತ್ಸೆಯ ಕಾನೂನಿನ ಪ್ರತಿಯನ್ನು ಲಗತ್ತಿಸಲಾಗಿದೆ) ಎ.ಬಿ.ಸಿ. (ಡಾಗ್ಸ್) ರೂಲ್ ೨೦೦೧ನ್ನು ಲಗತ್ತಿಸಲಾಗಿದೆ.
೮. ೧೯೯೫ರಿಂದೀಚೆಗೆ ಬೆಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಬೀದಿನಾಯಿಗಳ ನಿಯಂತ್ರಣಕ್ಕೆ ಮಾಡಲಾಗಿರುವ ವೆಚ್ಚವೆಷ್ಟು? ಪ್ರತಿ ವರ್ಷದ ವೆಚ್ಚದ ವಿವರಗಳನ್ನು ಒದಗಿಸಿ.
ಬೃ.ಬೆಂ.ಮ. ಪಾಲಿಕೆ:
ಬೃಹತ್ ಬೆಂಗಳೂರು ಮಹಾನಗರಪಾಲಿಕೆಯಲ್ಲಿ ಬೀದಿನಾಯಿಗಳ ಸಂತಾನಹರಣ ಶಸ್ತ್ರಚಿಕಿತ್ಸೆ ಕಾರ್ಯಕ್ರಮ ೨೦೦೧ರಲ್ಲಿ ಪ್ರಾರಂಭವಾಗಿದ್ದು ಅದರ ವೆಚ್ಚದ ಮಾಹಿತಿ ಈ ರೀತಿ ಇರುತ್ತದೆ
ವರ್ಷ ವೆಚ್ಚ (ರೂ)
೨೦೦೧-೦೨ ೫೧೩೩೪೦೦
೨೦೦೨-೦೩ ೭೯೧೪೫೨೫
೨೦೦೩-೦೪ ೧೨೩೧೪೦೫೩
೨೦೦೪-೦೫ ೧೪೯೧೪೪೫೫
೨೦೦೫-೦೬ ೧೩೫೫೪೫೭೦
೨೦೦೬-೦೭ (೨೦೦೬ ಸೆಪ್ಟೆಂಬರ್ ವರೆಗೆ) ೬೪೨೧೬೬೦
೯. ೧೯೯೫ರಿಂದೀಚೆಗೆ ಬೆಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಬೀದಿನಾಯಿಗಳ ನಿಯಂತ್ರಣಕ್ಕೆ ಪ್ರಾಣಿ ದಯಾ ಸಂಘಟನೆಗಳಿಗೆ ಹಣವನ್ನು ಒದಗಿಸಲಾಗಿದೆಯೇ, ಹಾಗಿದ್ದರೆ ಅದರ ವಿವರಗಳನ್ನು ಒದಗಿಸಿ. ಅಂತಹ ಸಂದರ್ಭದಲ್ಲಿ ಒದಗಿಸಿರುವ ಹಣಕ್ಕೆ ಪ್ರತಿಯಾಗಿ ಈ ಸಂಸ್ಥೆಗಳೊಂದಿಗೆ ಯಾವುದೇ ಕರಾರು ಯಾ ಒಪ್ಪಂದಗಳನ್ನು ಮಾಡಿಕೊಳ್ಳಲಾಗಿದೆಯೇ, ಹಾಗಿದ್ದರೆ ಅಂತಹವುಗಳ ಪ್ರತಿಗಳನ್ನು ಒದಗಿಸಿ.
ಬೃ.ಬೆಂ.ಮ. ಪಾಲಿಕೆ:
೨೦೦೧ರಿಂದ ಎ.ಬಿ.ಸಿ. ಕಾರ್ಯಕ್ರಮಕ್ಕೆ ಪ್ರಾಣಿ ದಯಾ ಸಂಘಗಳಿಗೆ ಹಣ ಒದಗಿಸಲಾಗಿದೆ. ವಿವರಗಳು ಈ ಕೆಳಕಂಡಂತಿವೆ:
ವರ್ಷ ಸಂಸ್ಥೆಯ ಹೆಸರು/ಪಾವತಿಸಿದ ಮೊತ್ತ
೨೦೦೧-೦೨ ಕ್ಯೂಪಾ: ೧೬೮೨೮೦೦
ಕರುಣಾ: ೧೦೯೨೦೦೦
ಎ.ಆರ್.ಎಫ್: ೨೩೫೮೬೦೦
೨೦೦೩-೦೩: ಕ್ಯೂಪಾ: ೨೯೭೮೮೨೫
ಕರುಣಾ: ೨೧೮೪೦೦೦
ಎ.ಆರ್.ಎಫ್: ೨೭೫೧೭೦೦
೨೦೦೩-೦೪: ಕ್ಯೂಪಾ: ೪೧೯೬೯೮೩
ಕರುಣಾ: ೧೮೮೬೦೦೦
ಎ.ಆರ್.ಎಫ್: ೨೭೬೫೯೬೦
ಕೃಪಾ: ೧೧೦೪೬೦೦
ಎ.ಎಸ್.ಟಿ.: ೧೩೬೦೫೧೦
೨೦೦೪-೦೫: ಕ್ಯೂಪಾ: ೪೭೧೭೭೯೫
ಕರುಣಾ: ೩೦೪೨೬೮೦
ಎ.ಆರ್.ಎಫ್: ೩೯೨೭೯೧೦
ಕೃಪಾ: ೨೪೨೬೦೭೦
೨೦೦೫-೦೬ ಕ್ಯೂಪಾ: ೪೭೦೨೩೧೦
ಕರುಣಾ: ೩೨೩೨೮೮೦
ಎ.ಆರ್.ಎಫ್: ೪೦೪೮೬೭೦
ಕೃಪಾ: ೧೫೭೦೭೧೦
೨೦೦೬-೦೭: (ಸೆಪ್ಟೆಂಬರ್ ೨೦೦೬ ರವರೆಗೆ) ಕ್ಯೂಪಾ: ೨೩೪೧೨೮೦
ಕರುಣಾ: ೧೪೧೩೩೬೦
ಎ.ಆರ್.ಎಫ್: ೧೭೦೨೭೭೦
ಕೃಪಾ: ೯೬೪೨೫೦
೨೦೦೩ರಿಂದ ಎಮ್.ಒ.ಯು ಮಾಡಿಕೊಳ್ಳಲಾಗುತ್ತಿದೆ. ಅದರ ಪ್ರತಿಗಳನ್ನು ಲಗತ್ತಿಸಲಾಗಿದೆ.
೧೦. ೧೯೯೫ರಿಂದೀಚೆಗೆ ಬೆಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಪ್ರತಿವರ್ಷ ಎಷ್ಟು ಬೀದಿನಾಯಿಗಳನ್ನು
ಕೊಲ್ಲಲಾಗಿದೆ ಮತ್ತು ಎಷ್ಟು ಬೀದಿನಾಯಿಗಳನ್ನು ಸಂತಾನಹರಣ ಚಿಕಿತ್ಸೆಗೆ ಒಳಪಡಿಸಲಾಗಿದೆ? ಅವುಗಳಲ್ಲಿ ಗಂಡು ನಾಯಿಗಳೆಷ್ಟು, ಹೆಣ್ಣು ನಾಯಿಗಳೆಷ್ಟು? ಬೀದಿನಾಯಿಗಳ ಸಂತಾನಹರಣ ಚಿಕಿತ್ಸೆಯನ್ನು ಯಾರು ನಡೆಸಿದರು, ಅವರ ವಿದ್ಯಾರ್ಹತೆಯೇನು ಮತ್ತು ವಿಳಾಸವೇನು? ಪ್ರತಿ ನಾಯಿಯ ಸಂತಾನಹರಣ ಚಿಕಿತ್ಸೆಗೆ ಮಹಾನಗರಪಾಲಿಕೆಯು ನೀಡಿರುವ ಹಣವೆಷ್ಟು? ಕಳೆದ ಹತ್ತು ವರ್ಷಗಳಲ್ಲಿ ಸಂತಾನಹರಣ ಚಿಕಿತ್ಸೆಗೊಳಗಾದ ನಾಯಿಗಳ ಪೈಕಿ ಈಗ ಜೀವಂತವಾಗಿ ಉಳಿದಿರುವ ನಾಯಿಗಳ ಸಂಖ್ಯೆಯೆಷ್ಟು?
ಬೃ.ಬೆಂ.ಮ. ಪಾಲಿಕೆ:
ಬೆಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಈ ಕೆಳಕಂಡಂತೆ ಪ್ರತಿ ವರ್ಷ ಬೀದಿನಾಯಿಗಳನ್ನು ಸಂತಾನಹರಣ ಚಿಕಿತ್ಸೆಗೆ ಹಾಗೂ ದಯಾಮರಣಕ್ಕೊಳಪಡಿಸಲಾಗಿದೆ (ನಾಯಿಗಳನ್ನು ಕೊಲ್ಲಲಾಗುವುದಿಲ್ಲ)
ವರ್ಷ ಸಂತಾನಹರಣ ಶಸ್ತ್ರಚಿಕಿತ್ಸೆಗೊಳಪಡಿಸಿದ ನಾಯಿಗಳು ದಯಾಮರಣಕ್ಕೊಳಪಡಿಸಿದ ಒಟ್ಟು ನಾಯಿಗಳು (ಗಂಡು+ಹೆಣ್ಣು)
ಗಂಡು ಹೆಣ್ಣು
೨೦೦೧-೦೨ ೭೩೮೪ ೯೨೩೫ ೬೦೭೬
೨೦೦೨-೦೩ ೭೭೩೩ ೯೫೮೬ ೪೯೯೦
೨೦೦೩-೦೪ ೧೬೧೪೯ ೧೪೪೩ ೩ ೭೮೭೩
೨೦೦೪-೦೫ ೧೭೩೭೧ ೧೫೫೩೬ ೭೭೮೬
೨೦೦೫-೦೬ ೭೭೫೪ ೧೭೪೧೪ ೮೧೭೩
೨೦೦೬-೦೭ (ಫೆಬ್ರವರಿ ೦೭ ರವರೆಗೆ) ೧೪೮೩೬ ೧೩೮೧೫ ೮೦೮೪
ಬೀದಿನಾಯಿಗಳನ್ನು ಸಂತಾನಹರಣ ಚಿಕಿತ್ಸೆಗಳನ್ನು ಅರ್ಹ ಪಶುವೈದ್ಯರಿಂದ ನಡೆಸಲಾಗುತ್ತಿದೆ. ಇವರ ವಿದ್ಯಾರ್ಹತೆ ಕನಿಷ್ಠ ಬಿ.ವಿ.ಎಸ್ಸಿ. ಆಗಿದ್ದು ಅವರ ವಿಳಾಸಗಳು ಸಂಬಂಧಿಸಿದ ಸಂಸ್ಥೆಗಳಲ್ಲಿರುತ್ತವೆ.
ಪ್ರತಿ ನಾಯಿಯ ಸಂತಾನಹರಣ ಚಿಕಿತ್ಸೆಗೆ ಮಹಾನಗರಪಾಲಿಕೆಯು ನೀಡುತ್ತಿರುವ ಹಣ ಈ ಕೆಳಗಿನಂತಿದೆ:
ಸಂಸ್ಥೆಯ ಹೆಸರು ಗಂಡು ಒಂದಕ್ಕೆ ರೂ ಹೆಣ್ಣು ಒಂದಕ್ಕೆ ರೂ
೧. ಕರುಣಾ ೪೦೦ ೪೨೦
೨. ಕ್ಯೂಪಾ ೩೭೫ ೩೯೫
೩.ಕೃಪಾ ೪೧೦ ೪೩೦
೪.ಎ.ಆರ್.ಎಫ್. ೪೦೦ ೪೨೦
ಜೀವಂತವಾಗಿ ಉಳಿದಿರುವ ನಾಯಿಗಳ ಎಣಿಕೆ ಇನ್ನು ಮಾಡಿರುವುದಿಲ್ಲ.
೧೧. ೧೯೯೫ರಿಂದೀಚೆಗೆ ಬೆಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಪ್ರತಿರ್ಷ ಎಷ್ಟು ಬೀದಿನಾಯಿಗಳಿಗೆ ರೇಬೀಸ್ ಚುಚ್ಚುಮದ್ದನ್ನು ನೀಡಲಾಗಿದೆ ಮತ್ತು ಅವುಗಳ ಪೈಕಿ ಪುನರಾವರ್ತಿತ ಚುಚ್ಚುಮದ್ದನ್ನು ಪಡೆದ ನಾಯಿಗಳ ಸಂಖ್ಯೆಯೆಷ್ಟು? ಚುಚ್ಚುಮದ್ದನ್ನು ಪಡೆದ ನಾಯಿಗಳನ್ನು ಗುರುತಿಸಲು ಬಳಸಿರುವ ವಿಧಾನ ಯಾವುದು?
ಬೃ.ಬೆಂ.ಮ. ಪಾಲಿಕೆ:
ಬೀದಿನಾಯಿಗಳಿಗೆ ರೇಬೀಸ್ ಲಸಿಕೆ ಕಾರ್ಯಕ್ರಮ ೨೦೦೧ರಿಂದ ಜಾರಿಯಲ್ಲಿದ್ದು ಅದರ ವಿವರ ಈ ಕೆಳಕಂಡಂತಿದೆ
ವರ್ಷ ರೇಬೀಸ್ ಲಸಿಕೆಗಳಪಡಿಸಿದ ಒಟ್ಟು ನಾಯಿಗಳು ಪುನರಾವರ್ತಿತ ಚುಚ್ಚುಮದ್ದನ್ನು ಪಡೆದ ನಾಯಿಗಳು
೨೦೦೧-೦೨ ೨೧೬೩೫ ೧೬೪೧೩
೨೦೦೨-೦೩ ೨೨೨೭೧ ೧೬೫೩೨
೨೦೦೩-೦೪ ೪೭೯೬೫ ೧೭೭೯೯
೨೦೦೪-೦೫ ೬೨೧೩೪ ೨೯೭೭೩
೨೦೦೫-೦೬ ೬೭೧೯೪ ೩೨೯೮೯
೨೦೦೬-೦೭ (ಫೆಬ್ರವರಿ ೦೭ರವರೆಗೆ) ೫೫೧೮೯ ೨೭೧೨೩
ಪುನರಾವರ್ತಿತ ನಾಯಿಗಳನ್ನು ಗುರುತಿಸಲು ಕಾಲರ್ ಅಳವಡಿಸಲಾಗುತ್ತದೆ
೧೨. ೧೯೯೫ರಿಂದೀಚೆಗೆ ಬೆಂಗಳೂರು ಮಹಾನಗರಪಾಲಿಕೆಯ ಆಸ್ಪತ್ರೆಗಳಲ್ಲಿ/ಚಿಕಿತ್ಸಾಲಯಗಳಲ್ಲಿಪ್ರತಿವರ್ಷ ನಾಯಿಕಡಿತದ ಚಿಕಿತ್ಸೆಗೆ ಬಂದಿರುವವರ ಸಂಖ್ಯೆ ಎಷ್ಟು? ೧೯೯೫ರಿಂದೀಚೆಗೆ ಬೆಂಗಳೂರು ಮಹಾನಗರಪಾಲಿಕೆಯ ವ್ಯಾಪ್ತಿಯಲ್ಲಿ ಎಷ್ಟು ರೇಬೀಸ್ ಪ್ರಕರಣಗಳು ದಾಖಲಾಗಿವೆ?
ಬೆಂಗಳೂರು ಮಹಾನಗರಪಾಲಿಕೆಯ ಆಸ್ಪತ್ರೆಗಳಲ್ಲಿ ದಾಖಲಾಗಿರುವ ನಾಯಿಕಡಿತದ ಪ್ರಕರಣಗಳು ಈ ಕೆಳಕಂಡಂತಿವೆ:
ವರ್ಷ ನಾಯಿ ಕಡಿತದ ಸಂಖ್ಯೆ
೨೦೦೧-೦೨ ೨೨೯೦೫
೨೦೦೨-೦೩ ೧೮೮೮೪
೨೦೦೩-೦೪ ೨೨೯೪೦
೨೦೦೪-೦೫ ೩೨೯೬೭
೨೦೦೫-೦೬ ೨೭೬೫೭
೨೦೦೬-೦೭ (ಫೆಬ್ರವರಿ ೦೭ರವರೆಗೆ) ೧೬೩೪೧
ಬೆಂಗಳೂರು ಮಹಾನಗರಪಾಲಿಕೆಯ ವ್ಯಾಪ್ತಿಯಲ್ಲಿ ೨೦೦೧ನೇ ಇಸವಿಯಿಯಿಂದ ೨೦೦೭ನೇ ಫೆಬ್ರವರಿವರೆಗೆ ಒಟ್ಟು ೩೭ ರೇಬೀಸ್ ಪ್ರಕರಣಗಳು ದಾಖಲಾಗಿದ್ದು ೨೦೦೫ರಿಂದ ಇದುವರೆಗೂ ಯಾವುದೇ ರೇಬೀಸ್ ಪ್ರಕರಣಗಳು ದಾಖಲಾಗಿಲ್ಲ
ಬೆಂಗಳೂರು ಮಹಾನಗರಪಾಲಿಕೆಯಲ್ಲಿ ಎ.ಬಿ.ಸಿ. ಕಾರ್ಯಕ್ರಮವು ೨೦೦೧ರಿಂದ ಪ್ರಾರಂಭವಾಗಿದ್ದು, ಕೇಳಲಾದ ಮಾಹಿತಿಯನ್ನು ೨೦೦೧ರಿಂದ ಒದಗಿಸಲಾಗಿದೆ. ಇನ್ನುಳಿದ ಮಾಹಿತಿಯನ್ನು ಒದಗಿಸಲು ಕಡತವನ್ನು ಆರೋಗ್ಯ ಇಲಾಖೆಗೆ ವರ್ಗಾಯಿಸಲಾಗಿದೆ.
ಡಾ| ಶ್ರೀನಿವಾಸ ಕಕ್ಕಿಲ್ಲಾಯ, ಮಂಗಳೂರು; ರಮೇಶ ಉಡುಪ, ಬೆಂಗಳೂರು