ಗೋವುಗಳು, ಗೋ-ಲೋಬಲ್ ವಾರ್ಮಿಂಗ್ ಮತ್ತು ಗೋ ಸಮ್ಮೇಳನವೂ
ಡಾ| ಶ್ರೀನಿವಾಸ ಕಕ್ಕಿಲ್ಲಾಯ, ಮಂಗಳೂರು
ಗೋವುಗಳ ಮೇಲೊಂದು ‘ವಿಶ್ವ ಸಮ್ಮೇಳನವು’ ಇದೇ ಎಪ್ರಿಲ್ ೨೧ರಿಂದ ಹೊಸನಗರದಲ್ಲಿ ನಡೆಯಲಿದೆಯೆಂಬುದು ಮತ್ತು ಅದಕ್ಕಾಗಿ ಎಂಟು ಕೋಟಿ ರೂಪಾಯಿಗಳಷ್ಟು ವೆಚ್ಚವಾಗಲಿದ್ದು, ಕರ್ನಾಟಕದ ಘನ ಸರಕಾರವು ಈ ಸಲದ ಆಯವ್ಯಯಪತ್ರದಲ್ಲಿ ಇದಕ್ಕಾಗಿಯೇ ಎರಡು ಕೋಟಿ ರೂಪಾಯಿಗಳನ್ನು ಒದಗಿಸಿರುವುದು ಈಗಾಗಲೇ ಸುದ್ದಿಯಾಗಿದೆ, ಸಂಪದದಲ್ಲೂ ಈ ಬಗ್ಗೆ ಲೇಖನವಿದೆ. [http://sampada.net/event/3335]
ಮನುಷ್ಯ ಮತ್ತು ದನಗಳ ಸಂಬಂಧ ಬಹಳ ಹಳೆಯದೇನಲ್ಲ. ಆಧುನಿಕ ಮಾನವನ ಮೂರ್ನಾಲ್ಕು ಲಕ್ಷ ವರ್ಷಗಳ ಚರಿತ್ರೆಯಲ್ಲಿ ದನಗಳ ಪ್ರವೇಶವಾದದ್ದು ಸುಮಾರು ಏಳೆಂಟು ಸಾವಿರ ವರ್ಷಗಳ ಹಿಂದೆಯಷ್ಟೇ. ಸುಮಾರು ಹತ್ತು ಸಾವಿರ ವರ್ಷಗಳ ಹಿಂದೆ ಮನುಷ್ಯನು ತನ್ನ ಆಹಾರವನ್ನು ತಾನೇ ಬೆಳೆಯತೊಡಗಿದ ಬಳಿಕ, ಈ ಕಾರ್ಯದಲ್ಲಿ ನೆರವಾಗಲು ಎತ್ತು-ಕೋಣ-ಎಮ್ಮೆ-ದನಗಳಂತಹ ಹೇಳಿದಂತೆ ಪಳಗುವ ಪ್ರಾಣಿಗಳನ್ನು ಸಾಕತೊಡಗಿದ. ಕೃಷಿಕಾರ್ಯದಲ್ಲಿ ನೆರವಾದ ಈ ಪ್ರಾಣಿಗಳ ಹಾಲಿನ ರುಚಿಯನ್ನು ಸವಿದಾಗಿನಿಂದ ಅದಕ್ಕೂ ಕೈಹಾಕಿದ. ಕಾಲಕ್ರಮೇಣ, ಕೃಷಿಯೊಂದಿಗೆ ಹೈನುಗಾರಿಕೆಯೂ ಒಂದು ಉದ್ಯಮವೇ ಆಗಿಬಿಟ್ಟಿತು, ಬಹುರಾಷ್ಟ್ರೀಯ ದೈತ್ಯ ಕಂಪೆನಿಗಳ ಪಾಲಾಗಿಬಿಟ್ಟಿತು, ಹೊಸ ಹೊಸ ಕೃಷಿತಳಿಗಳ ಜೊತೆಗೆ ದಷ್ಟಪುಷ್ಟವಾದ, ಲೀಟರುಗಟ್ಟಲೆ ಹಾಲನ್ನು ನೀಡುವ ಗೋತಳಿಗಳೂ ಬಂದವು. ಇನ್ನೊಂದೆಡೆ, ತಾಯಿಯ ಹಾಲನ್ನು ಕುಡಿಯುವ ವಯಸ್ಸು ಕಳೆದ ಬಳಿಕವೂ ಕುಡಿಯಲು ಹಾಲನ್ನು ಒದಗಿಸಿದ ದನಕ್ಕೆ ತನ್ನ ಸ್ವಂತ ತಾಯಿಯ (ಅಥವಾ ಅದಕ್ಕೂ ಮೇಲಿನ) ಸ್ಥಾನವನ್ನು ಕೆಲವರು ಕೊಟ್ಟುಬಿಟ್ಟರು (ಆದರೆ, ಅದೇ ರೀತಿ ಹಾಲನ್ನು ಒದಗಿಸುತ್ತಿರುವ ಎಮ್ಮೆ, ಆಡು, ಒಂಟೆ ಇತ್ಯಾದಿಗಳಿಗೇಕೆ ಈ ಸ್ಥಾನಮಾನ ದೊರೆಯಲಿಲ್ಲವೆನ್ನುವುದು ಸೋಜಿಗವೇ!). ದನಗಳ ಮೇಲಿನ ಈ ಮಮತೆಯು ಅಲ್ಲಿಗೇ ನಿಲ್ಲದೆ, ಗೋವುಗಳು ತಮಗೆ ಅಗತ್ಯವಿಲ್ಲವೆಂದು ಹೊರಹಾಕಿದ ಕಶ್ಮಲಗಳಾದ ಮಲ-ಮೂತ್ರಗಳು ಕೂಡ ಮನುಷ್ಯನ ಆರೋಗ್ಯಕ್ಕೂ, ನೆಮ್ಮದಿಗೂ ಉತ್ತಮ ಸಾಧನಗಳೆಂದು ಡಂಗುರ ಸಾರುವಲ್ಲಿಯವರೆಗೆ ತಲುಪಿತು. ಇದೀಗ ಗೋವುಗಳ ಮಲ-ಮೂತ್ರಗಳನ್ನು ಸಂಗ್ರಹಿಸಿ, ಅವುಗಳಿಗೊಂದು ವಿಶೇಷವಾದ ಶಕ್ತಿಯನ್ನು 'ಕೊಡಮಾಡಿಸಿ', ಶೀಷೆಗಳಲ್ಲಿ ಅವುಗಳನ್ನು ತುಂಬಿಸಿ ಮಾರಾಟ ಮಾಡುವ ಕೆಲಸವೂ ಆರಂಭವಾಗಿದೆ. ಕೀಟನಾಶದಿಂದ ಹಿಡಿದು ಕ್ಯಾನ್ಸರ್ ರೋಗದ ಚಿಕಿತ್ಸೆಯವರೆಗೂ ಈ ಕಶ್ಮಲಗಳ ಬಳಕೆಗೆ ಕುಮ್ಮಕ್ಕು ದೊರಕುತ್ತಿದೆ (ಅದರಲ್ಲೂ ಒಂದು ವಿಧದ ವರ್ಣಬೇಧವನ್ನು ಹೇರಲಾಗಿದೆ - ಭಾರತೀಯ ದನಗಳ ಕಶ್ಮಲಗಳಿಗೆ ಮಾತ್ರವೇ ಈ ತರಹದ ವಿಶೇಷವಾದ ಗುಣವಿದೆಯಂತೆ; ಈ ಗೋವುಗಳನ್ನು ಹಡೆದ ಭಾರತ ಮಾತೆ ನಿಜಕ್ಕೂ ಧನ್ಯಳು!). ಮುಂದೊಂದು ದಿನ, ಆಕಳ ಹಾಲಿನ ಮಾರಾಟವು ದೊಡ್ದ ಉದ್ದಿಮೆಯಾಗಿ ಬೆಳೆದ ರೀತಿಯಲ್ಲಿಯೇ, ಭಾರತೀಯ ದನಗಳ ಕಶ್ಮಲಗಳ ಮಾರಾಟವೂ ಒಂದು ಬಹುದೊಡ್ಡ ಉದ್ಯಮವಾಗಬಹುದೇನೋ? ಅದಿರಲಿ, ಗೋಮಾತೆಯ ಮೇಲಿನ ಮಮತೆಯು ಕೆಲವರಲ್ಲಿ ಉಚ್ಛ್ರಾಯಕ್ಕೆ ತಲುಪಿ, ‘ಗೋಮಾತೆಯ’ ಹೆಸರಲ್ಲಿ ಕೊಲೆಗಳು, ದೊಂಬಿಗಳು, ಕರ್ಫ್ಯೂ ಮುಂತಾದ ವಿಪರೀತದ ಪರಿಸ್ಥಿತಿಗಳು ಆಗಿಂದಾಗ್ಗೆ ಅಲ್ಲಲ್ಲಿ ನಿರ್ಮಾಣಗೊಳ್ಳುವಲ್ಲಿಯವರೆಗೆ ಬಂದು ತಲುಪಿದೆ. (ಆದರೆ ನಮ್ಮನ್ನು ಹೊತ್ತು, ಹೆತ್ತು, ತನ್ನ ಎದೆಯ ಅಮೃತವನ್ನು ನೀಡಿ ಸಾಕಿ ಸಲಹಿದ ಸ್ವಂತ ಅಮ್ಮನನ್ನು ಸುಖವಾಗಿ ನೋಡಿಕೊಳ್ಳುವ ಬಗ್ಗೆ ಈ ತರಹದ ಗಲಭೆಗಳಾಗುವುದನ್ನು ಎಲ್ಲಾದರೂ ಯಾರಾದರೂ ಕೇಳಿದ್ದೀರಾ?) 'ಅನಾಥ' ಗೋವುಗಳಿಗೂ, ವನಿತೆಯರಿಗೂ ಆಶ್ರಯವನ್ನು ನೀಡುವ ಸಂಸ್ಥೆಗಳೂ ಅಲ್ಲಲ್ಲಿ ಹುಟ್ಟಿಕೊಳ್ಳುತ್ತಿವೆ, ಆದರೆ ಗೋವುಗಳಿಗೂ, ವನಿತೆಯರಿಗೂ ತುಲನೆಯೇನೆನ್ನುವುದು ಸ್ಪಷ್ಟವಿಲ್ಲ.
ಇಂತಹ ಸನ್ನಿವೇಶದಲ್ಲಿ, ಇದೇ ಎಪ್ರಿಲ್ ತಿಂಗಳ ಮೂರನೇ ವಾರದಲ್ಲಿ ಜಗನ್ಮಾತೆಯ (ಭೂಮಿಯನ್ನೇ ಹೆತ್ತವಳು?!) ಬಗ್ಗೆ ‘ವಿಶ್ವ ಗೋ ಸಮ್ಮೇಳನವು’ ನಡೆಯಲಿದ್ದು ಇದರಿಂದ ಜಗದೊಳಿತಾಗುವುದೆಂದು ಹೇಳಲಾಗುತ್ತಿದೆ. ಅದಕ್ಕಾಗಿ ನಾವು-ನೀವು ಸರಕಾರದ ಬೊಕ್ಕಸಕ್ಕೆ ಕಟ್ಟಿರುವ ತೆರಿಗೆಯಿಂದ ಎರಡು ಕೋಟಿ ರೂಪಾಯಿಗಳಷ್ಟನ್ನು ಗೋ ಮಾತೆಯ ಮೇಲೆ ಅತೀವವಾದ ಮಮತೆಯಿರುವ ನಮ್ಮ ಸರಕಾರವು ಈಗಾಗಲೇ ಒದಗಿಸಿದೆ.
ಜಗದೊಳಿತು?
ದನಗಳನ್ನು ‘ಮಾತೆಯರನ್ನಾಗಿಸಿದ’ ಆ ಹಾಲೇ ಅಷ್ಟೊಂದು ಆರೋಗ್ಯಕರವಾದ ಆಹಾರವಲ್ಲವೆನ್ನುವ ಸತ್ಯವು ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ಹೆಚ್ಚು ಪ್ರಕಟಗೊಳ್ಳುತ್ತಲಿದೆ. ಆಕಳ ಹಾಲನ್ನು ನಿರಂತರವಾಗಿ ಸೇವಿಸುವುದರಿಂದ ಮನುಷ್ಯನ ದೇಹದ ಮೇಲೆ ಹಲವಾರು ದುಷ್ಪರಿಣಾಮಗಳುಂಟಾಗುವ ಸಾಧ್ಯತೆಗಳ ಬಗ್ಗೆ ಸಹಸ್ರಾರು ಸಂಶೋಧನಾ ಲೇಖನಗಳು ಈಗಾಗಲೇ ಪ್ರಕಟವಾಗಿದ್ದು, ಅವನ್ನು ಒಪ್ಪಿಕೊಳ್ಳುವ ಧೈರ್ಯವನ್ನು ನಾವಿನ್ನೂ ತೋರಬೇಕಷ್ಟೆ. ಇತ್ತೀಚೆಗೆ, ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದ ಜೊತೆಗೆ ಮೊಟ್ಟೆಯ ಬದಲಾಗಿ ಹಾಲನ್ನೇ ನೀಡಬೇಕೆಂದು ಕೆಲವು ‘ಧಾರ್ಮಿಕ ನಾಯಕರುಗಳೂ’, ಅವರ ಬೆಂಬಲಕ್ಕಿರುವ ರಾಜಕಾರಣಿಗಳೂ ಕಿರುಚಾಡಿದ ಸಂದರ್ಭದಲ್ಲಿ, ಈ ಬಗ್ಗೆ ನಾನು ಹೆಚ್ಚಿನ ವಿವರಗಳನ್ನು ಬರೆದಿದ್ದೇನೆ (ಇಲ್ಲಿ ನೋಡಿ http://arogya.sampada.net/node/5 ). ಹಾಲನ್ನೀಯುವ ‘ಗೋಮಾತೆಯ’ ಬಗೆಗಿನ ‘ವಿಶ್ವ’ ಸಮ್ಮೇಳನಕ್ಕೆ ನಮ್ಮ ಹಣವನ್ನು ದಾನ ನೀಡಿರುವವರೂ ಹಾಲಿನ ಪರವಹಿಸಿ ಬೊಬ್ಬಿರಿದ ಇದೇ ರಾಜಕಾರಣಿಗಳೆನ್ನುವುದು ಗಮನಿಸತಕ್ಕದ್ದಾಗಿದೆ.
ಹಸುಗಳ ಹಾಲನ್ನು ಸೇವಿಸುವುದರಿಂದ ಮನುಷ್ಯನ ಆರೋಗ್ಯದ ಮೇಲೆ ದುಷ್ಪರಿಣಾಮಗಳುಂಟಾಗಬಹುದೆಂದ ಮೇಲೆ, ಹಸುಗಳ ಮೂತ್ರ ಮತ್ತದರಿಂದ ತಯಾರಿಸಿದ ಅರ್ಕಗಳಿಂದ ಆರೋಗ್ಯವು ನೆಟ್ಟಗಾಗುತ್ತದೆಯೆಂದು ಹೇಳುವುದಕ್ಕೆ ಸಾಕ್ಶ್ಯಾಧಾರಗಳಿವೆಯೇ? ಆ ಬಗ್ಗೆ ವೈಜ್ಞಾನಿಕವಾದ ಸಂಶೋಧನೆಗಳಾಗಿವೆಯೇ? ಆಗಿದ್ದರೆ ಅವು ಯಾವುದೇ ಪ್ರತಿಷ್ಠಿತ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆಯೇ?
ಹಸುಗಳ ಹಾಲಿನಿಂದ ಮನುಷ್ಯನ ಆರೋಗ್ಯದ ಮೇಲೆ ದುಷ್ಪರಿಣಾಮಗಳಾಗುವುದು ಮಾತ್ರವೇ ಅಲ್ಲ, ಹಾಲು ಮತ್ತು ಮಾಂಸಕ್ಕಾಗಿ ಹಸುಗಳು ಹಾಗೂ ಇನ್ನಿತರ ಪ್ರಾಣಿಗಳನ್ನು ಮನುಷ್ಯನು ಸಾಕುತ್ತಿರುವುದರಿಂದಾಗಿ ಪ್ರಾಕೃತಿಕ ಸಮತೋಲನವೇ ಏರುಪೇರಾಗುತ್ತಿ ದೆಯೆಂದು ವಿಶ್ವ ಸಂಸ್ಥೆಯ ಇತ್ತೀಚಿನ ವರದಿಯೊಂದು ಎಚ್ಚರಿಕೆಯನ್ನು ನೀಡಿರುವುದು ಬಹುಷಃ ಹೆಚ್ಚಿನವರ ಗಮನಕ್ಕೆ ಬಂದಿಲ್ಲವೇನೋ? ಮನುಷ್ಯನ ಕೃಪೆಯಿಂದಾಗಿ ಆಗಿರುವ ಈ ನಿಸರ್ಗಸಹಜವಲ್ಲದ ಪ್ರಾಣಿಸಂಖ್ಯಾಸ್ಫೋಟಕ್ಕೆ ಭೂಮಿತಾಯಿಯು ಬಲುದೊಡ್ಡ ಬೆಲೆ ತೆರಬೇಕಾಗಿ ಬಂದಿದೆ. ನವೆಂಬರ್ ೨೦೦೬ರಲ್ಲಿ ವಿಶ್ವಸಂಸ್ಥೆಯ ಅಂಗಸಂಸ್ಥೆಯಾದ ಆಹಾರ ಮತ್ತು ಕೃಷಿ ಸಂಸ್ಥೆ (FAO) ಪ್ರಕಟಿಸಿರುವ ವರದಿಯಲ್ಲಿ ಭೂಲೋಕದ ತಾಪಮಾನದ ಏರಿಕೆಗೆ, ಭೂಮಿ ಬರಡಾಗುವುದಕ್ಕೆ, ನೀರಿನ ಮೂಲಗಳು ಮರೆಯಾಗುತ್ತಿರುವುದಕ್ಕೆ ಮತ್ತು ಕಲುಷಿತಗೊಳ್ಳುತ್ತಿರುವುದಕ್ಕೆ ಸಾಕುಪ್ರಾಣಿಗಳ ಕೊಡುಗೆಯು ಗಣನೀಯವಾಗಿದೆಯೆಂದು ಹೇಳಲಾಗಿದೆ. Livestock’s Long Shadow–Environmental Issues and Options ಎಂಬ ಈ ವರದಿಯಲ್ಲಿ ಹೇಳಲಾಗಿರುವ ಕೆಲವು ಮುಖ್ಯಾಂಶಗಳು ಹೀಗಿವೆ:
[ಈ ವರದಿಯನ್ನು ಅಂತರ್ಜಾಲದಲ್ಲಿ ಪಡೆಯಬೇಕಾದರೆ ಈ ತಾಣಗಳನ್ನು ನೋಡಿ:
1. Rearing cattle produces more greenhouse gases than driving cars, UN report warns http://www.un.org/apps/news/story.asp?NewsID=20772&Cr=global&Cr1=warming
2. Livestock’s Long Shadow–Environmental Issues and Options http://www.virtualcentre.org/en/library/key_pub/longshad/A0701E00.pdf ]
• ಸಾಕುಪ್ರಾಣಿಗಳು ಭೂಮಿಯ ನೆಲವಿಸ್ತೀರ್ಣದ ಶೇ.30ರಷ್ಟನ್ನು ಬಳಸಿಕೊಳ್ಳುತ್ತಿದ್ದು, ಅವುಗಳ ಆಹಾರಗಳನ್ನು ಬೆಳೆಯುವುದಕ್ಕೆ ಇನ್ನೂ ಹೆಚ್ಚಿನ ಭೂಭಾಗವು ಬಳಕೆಯಾಗುತ್ತಲಿದೆ. ಸಾಕುಪ್ರಾಣಿಗಳಿಗಾಗಿ ಹುಲ್ಲುಗಾವಲುಗಳನ್ನು ವಿಸ್ತರಿಸಲಾಗುತ್ತಿರುವುದು ಕಾಡುಗಳ ನಾಶಕ್ಕೆ ಅತಿಮುಖ್ಯವಾದ ಕಾರಣಗಳಲ್ಲೊಂದಾಗಿದೆ. ಲ್ಯಾಟಿನ್ ಅಮೆರಿಕದಲ್ಲಿ ಒಂದು ಕಾಲಕ್ಕೆ ದಟ್ಟವಾಗಿದ್ದ ಅಮೆಜಾನ್ ಕಾಡುಗಳಲ್ಲಿ ಶೇ.70ರಷ್ಟನ್ನು ಇಂದು ಹುಲ್ಲುಗಾವಲುಗಳಾಗಿ ಪರಿವರ್ತಿಸಲಾಗಿದೆ. ಜಾನುವಾರುಗಳು ಮೇವು ತಿನ್ನುವ ಭರಾಟೆಯಲ್ಲಿ ಹಸಿರೆಲ್ಲ ಮಾಯವಾಗಿ ಭೂಮಿಯು ಬೆಂಗಾಡಾಗುವ ಅಪಾಯವಿದೆಯೆಂದೂ ಈ ವರದಿಯು ಎಚ್ಚರಿಕೆಯನ್ನು ನೀಡಿದೆ. (ಅರೇಬಿಯಾದಲ್ಲಿ ಸಾವಿರಗಟ್ಟಲೆಯಲ್ಲಿ ಸಾಕಿದ ಆಡು-ಕುರಿಗಳು ಇಡೀ ಪ್ರದೇಶವನ್ನೇ ಮರುಳುಗಾಡಾಗಿಸಿದ್ದರ ನೆನಪು ಆರಿಹೋಗುವ ಮೊದಲೇ ಈ ಎಚ್ಚರಿಕೆಯು ಮೊಳಗಿದೆ.)
• ಇದರ ಜೊತೆಗೆ, ಭೂಸವೆತ ಹಾಗೂ ನೀರಿನ ಕೊರತೆಗೂ ಸಾಕುಪ್ರಾಣಿಗಳು ಸಾಕಷ್ಟು ಮಟ್ಟಿಗೆ ಕಾರಣವಾಗಿವೆ. ಪಶುಸಂಗೋಪನೆಯಿಂದಾಗಿ ಹಲವಾರು ಜಲಮೂಲಗಳು ಕಲುಷಿತಗೊಂಡಿವೆ.
• ಭೂಮಿಯ ಮೇಲಿನ ತಾಪಮಾನದ ಏರಿಕೆಗೆ ಪಶುಸಂಗೋಪನೆಯ ವಿವಿಧ ಚಟುವಟಿಕೆಗಳು ಹಾಗೂ ಈ ಸಾಕುಪ್ರಾಣಿಗಳು ತಮ್ಮ ಕರುಳುಗಳಿಂದ ವಿಸರ್ಜಿಸುವ ಅನಿಲಗಳು ಗಣನೀಯವಾದ ಕಾರಣಗಳೆಂದು ಈ ವರದಿಯು ಎಚ್ಚರಿಸಿದೆ. ಇತ್ತೀಚಿನ ವರ್ಷಗಳಲ್ಲಿ ಭೂಮಿಯ ಮೇಲಿನ ತಾಪಮಾನವು ಅಪಾಯಕಾರಿ ಮಟ್ಟದಲ್ಲಿ ಏರುತ್ತಿರುವುದು ಮನುಷ್ಯನೂ ಸೇರಿದಂತೆ ಸಕಲ ಜೀವರಾಶಿಯ ಉಳಿವಿಗೇ ಸಂಚಕಾರವನ್ನು ತಂದೊಡ್ಡಿದೆ. ವರ್ಷ ೨೦೫೦ರ ವೇಳೆಗೆ ಹಲವು ಜೀವ ವೈವಿಧ್ಯಗಳು ಭೂಮಿಯ ಮೇಲಿಂದ ಮರೆಯಾಗಬಹುದೆಂದು ಅಂದಾಜಿಸಲಾಗಿದೆ. ತಾಪಮಾನದ ಏರಿಕೆಯಿಂದಾಗಿ ಉಂಟಾಗುವ ಹವಾಮಾನದ ವೈಪರೀತ್ಯಗಳು, ಸಾಗರದ ಮಟ್ಟಗಳಲ್ಲಿ ಏರಿಕೆ, ನೀರಿನ ಅತೀವ ಕೊರತೆ, ಕೀಟಜನ್ಯ ರೋಗಗಳಲ್ಲಿ ಹೆಚ್ಚಳ ಇವೇ ಮುಂತಾದ ಹತ್ತು ಹಲವು ಸಮಸ್ಯೆಗಳು ಈಗಾಗಲೇ ಗೋಚರಿಸಲಾರಂಭಿಸಿದ್ದು ಮುಂಬರುವ ವರ್ಷಗಳಲ್ಲಿ ಇವು ಭೂತಾಕಾರವಾಗಿ ಬೆಳೆದು ಮನುಷ್ಯನ ಸಾಮರ್ಥ್ಯಕ್ಕೇ ಸವಾಲಾಗಲಿವೆ. ಭೂಮಿಯ ತಾಪಮಾನದ ಏರಿಕೆಗೆ ಮನುಷ್ಯನ ನಿಸರ್ಗವಿರೋಧಿ ಚಟುವಟಿಕೆಗಳಿಂದ ಹೊರಹೊಮ್ಮುವ 'ಹಸಿರು ಮನೆ ಅನಿಲಗಳೇ' ಮುಖ್ಯ ಕಾರಣವೆನ್ನುವುದು ಸರ್ವವಿದಿತವಾಗಿದೆ. ವಿಮಾನಗಳು, ಹಡಗುಗಳು ಮತ್ತು ಭೂಸಂಚಾರಿ ವಾಹನಗಳು ಉಗುಳುವ ಹೊಗೆ ಹಾಗೂ ಕಾರ್ಖಾನೆಗಳು ಹೊರಬಿಡುವ ಹೊಗೆಗಳು ಒಂದೆಡೆಯಾದರೆ, ಇದಕ್ಕಿಂತಲೂ ಮುಖ್ಯವಾಗಿ, ಸಾಕು ಪ್ರಾಣಿಗಳು ಹುಲ್ಲನ್ನು ತಿಂದು ತಮ್ಮ ಕರುಳುಗಳಿಂದ ಹೊರಬಿಡುವ ಗಾಳಿಯಲ್ಲಿರುವ ಅನಿಲಗಳು ಕೂಡಾ 'ಹಸಿರು ಮನೆ' ಪರಿಣಾಮಕ್ಕೆ ಕಾರಣಗಳೆಂದು ವಿಶ್ವಸಂಸ್ಥೆಯ ಈ ವರದಿಯಲ್ಲಿ ಹೇಳಲಾಗಿದೆ. ಮಾನವನ ಚಟುವಟಿಕೆಗಳಿಂದಾಗಿ ಹೊರಹೊಮ್ಮುತ್ತಿರುವ 'ಹಸಿರುಮನೆ ಅನಿಲ'ಗಳಲ್ಲಿ, ಅಂಗಾರಾಮ್ಲದ ಶೇ.೯ ರಷ್ಟು, ನೈಟ್ರಸ್ ಆಕ್ಸೈಡ್‌ನ ಶೇ. ೬೫ ರಷ್ಟು ಮತ್ತು ಮಿಥೇನ್‌ನ ಶೇ.೩೭ ರಷ್ಟು ಸಾಕುಪ್ರಾಣಿಗಳ ಮೂಲದಿಂದಲೇ ಬರುತ್ತವೆಯೆಂದು ಈ ವರದಿಯಲ್ಲಿ ಅಂದಾಜಿಸಲಾಗಿದೆ. (ತನ್ನ ಹಾಗೂ ತಾನು ಸಾಕಿದ ಪ್ರಾಣಿಗಳ ಆಹಾರಕ್ಕೋಸ್ಕರ ಮನುಷ್ಯನು ನಡೆಸುತ್ತಿರುವ ಭತ್ತ ಮುಂತಾದ ಧಾನ್ಯಗಳ ಬೇಸಾಯದಲ್ಲಿಯೂ ಸಾಕಷ್ಟು ಪ್ರಮಾಣದಲ್ಲಿ ಮಿಥೇನ್ ಬಿಡುಗಡೆಯಾಗುತ್ತದೆಯೆನ್ನುವುದನ್ನು ಗಮನಿಸಿ). ಇವುಗಳ ಪೈಕಿ, ನೈಟ್ರಸ್ ಆಕ್ಸೈಡ್ ಮತ್ತು ಮಿಥೇನ್ ಅನಿಲಗಳು ಅಂಗಾರಮ್ಲಕ್ಕಿಂತ ಕ್ರಮವಾಗಿ ೨೯೬ ಪಟ್ಟು ಹಾಗೂ ೨೩ ಪಟ್ಟು ಹೆಚ್ಚು ಶಕ್ತಿಶಾಲಿಯಾಗಿವೆ. ಅಷ್ಟೇ ಅಲ್ಲದೆ, ಮಾನವನ ಚಟುವಟಿಕೆಗಳಿಂದ ಬಿಡುಗಡೆಯಾಗುವ ಅಮೋನಿಯಾದ ಶೇ.೬೪ ರಷ್ಟು ಪಾಲು ಸಾಕುಪ್ರಾಣಿಗಳಿಂದಲೇ ಬರುತ್ತದೆ ಮತ್ತು ಅಮೋನಿಯಾವು ಆಮ್ಲೀಯ ಮಳೆಯನ್ನುಂಟು ಮಾಡುತ್ತದೆ.
ಒಟ್ಟಿನಲ್ಲಿ ಪಶುಸಂಗೋಪನೆಯು ಭೂಮಿಯ ತಾಪಮಾನದ ಏರಿಕೆಗೆ, ಕಾಡುಗಳ ನಾಶಕ್ಕೆ, ಭೂಮಿಯು ಬಂಜರಾಗುವುದಕ್ಕೆ, ನೀರಿನ ಮೂಲಗಳು ಕಲುಷಿತಗೊಳ್ಳುವುದಕ್ಕೆ ಮತ್ತು ಮರೆಯಾಗುತ್ತಿರುವುದಕ್ಕೆ ಸಾಕಷ್ಟು ದೊಡ್ಡ ಕಾರಣವೆಂದು ವಿಶ್ವಸಂಸ್ಥೆಯ ವರದಿಯು ಎಚ್ಚರಿಸಿದೆ. ಈ ಸಮಸ್ಯೆಯತ್ತ ಅತಿ ತುರ್ತಾಗಿ ಗಮನ ಹರಿಸದಿದ್ದರೆ ಭೂಮಿಯ ಮೇಲೆ ಮನುಷ್ಯನೂ ಸೇರಿದಂತೆ ಇಡೀ ಜೀವ ಸಂಕುಲದ ಉಳಿವಿಗೇ ಸಂಚಕಾರ ಬಂದೊದಗಬಹುದೆಂದು ಹೇಳಲಾಗಿದೆ. ಭಾರತ, ಬ್ರೆಜಿಲ್ ಗಳಂತಹ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ವಾಹನಗಳಿಗಿಂತಲೂ ಪಶುಸಂಗೋಪನೆಯಿಂದಾಗಿಯೇ ಹೆಚ್ಚಿನ ಪರಿಸರ ಮಾಲಿನ್ಯವುಂಟಾಗುತ್ತಿರುವುದು ಗಮನಿಸತಕ್ಕ ವಿಚಾರವಾಗಿದೆ. ಈ ನಿಟ್ಟಿನಲ್ಲಿ ಹೇಳುವುದಾದರೆ, ಭಾರತದಲ್ಲಿ ಜಗತ್ತಿನ ಬೇರೆಲ್ಲೆಡೆಗಿಂತಲೂ ಹೆಚ್ಚು ಸಂಖ್ಯೆಯ ಸಾಕುಪ್ರಾಣಿಗಳಿವೆಯೆನ್ನುವುದು ನಮಗೆ ಹೆಮ್ಮೆ ತರುವ ಸಂಗತಿಯೇನಲ್ಲ.
ವಸ್ತುಸ್ಥಿತಿಯು ಹೀಗಿರುತ್ತಾ, ನಮ್ಮ ತೆರಿಗೆಯ ಹಣದ ಬೆಂಬಲದೊಂದಿಗೆ ನಡೆಯಲಿರುವ ವಿಶ್ವ ಗೋ ಸಮ್ಮೇಳನದಲ್ಲಿ ದನಗಳ ಹಾಲಿನಿಂದಾಗುವ ದುಷ್ಪರಿಣಾಮಗಳ ಬಗೆಗೆ, ಪಶುಸಂಗೋಪನೆಯಿಂದಾಗಿ ಜಗತ್ತಿನ ಪರಿಸರದ ಮೇಲಾಗುತ್ತಿರುವ ಹಾನಿಯ ಬಗೆಗೆ, ಅದರಲ್ಲೂ ವಿಶೇಷವಾಗಿ ಭೂಮಿಯ ತಾಪಮಾನದ ಮೇಲಾಗುತ್ತಿರುವ ವಿಪರೀತವಾದ ಪರಿಣಾಮಗಳ ಬಗೆಗೆ (ಜಗನ್ಮಾತೆಯಿಂದ ನಿಜಕ್ಕೂ ಜಗದೊಳಿತಾಗುವುದೇ ಎಂಬ ಬಗೆಗೆ) ಮತ್ತು ಒಟ್ಟಾರೆಯಾಗಿ ಮನುಷ್ಯನಿಗೆ ದನಗಳ ಅಗತ್ಯದ ಬಗೆಗೆ ವೈಜ್ಞಾನಿಕವಾದ, ವೈಚಾರಿಕವಾದ, ವಸ್ತುನಿಷ್ಠವಾದ, ವೈಯಕ್ತಿಕ ಭಾವೋದ್ರೇಕಗಳಿಂದ ಮುಕ್ತವಾದ ಚರ್ಚೆಗಳು ನಡೆಯಲಿ ಎಂದು ತೆರಿಗೆದಾರರಾದ ನಾವೆಲ್ಲರೂ ಆಶಿಸಬಹುದೇ?