ಬೀದಿನಾಯಿಗಳನ್ನು ಕೊಲ್ಲಬಾರದೇಕೆ?

ಡೊಂಕು ಬಾಲದ ನಾಯಕರೇ, ನೀವೇನೂಟವ ಮಾಡಿದಿರಿ?
ಡಾ| ಶ್ರೀನಿವಾಸ ಕಕ್ಕಿಲ್ಲಾಯ, ಮಂಗಳೂರು

ಕಳೆದ ಕೆಲ ವಾರಗಳಲ್ಲಿ ರಾಜ್ಯದ ಎಲ್ಲೆಡೆಗಳಿಂದ ಬೀದಿನಾಯಿಗಳ ರಾಕ್ಷಸೀ ವರ್ತನೆಯ ವರದಿಗಳು ಸಮಸ್ತ ನಾಗರಿಕರೂ ಬೆಚ್ಚಿಬೀಳುವಂತೆ ಮಾಡಿವೆ. ಬೆಂಗಳೂರು ಮಹಾನಗರಿಯಲ್ಲಿ ತಮ್ಮ ಮನೆಯ ವಠಾರದಲ್ಲಿ ಆಟವಾಡುತ್ತಿದ್ದ ಇಬ್ಬರು ಮುಗ್ಧ ಮಕ್ಕಳನ್ನು ಬೀದಿನಾಯಿಗಳು ಕಚ್ಚಿ ಕೊಂದರೆ, ಮೈಸೂರು, ಶಿವಮೊಗ್ಗೆ ಮುಂತಾದೆಡೆಗಳಲ್ಲಿ ಮಕ್ಕಳಾದಿಯಾಗಿ ದಾರಿಯಲ್ಲಿ ಹೋಗುತ್ತಿದ್ದವರ ಮೇಲೆ ದಾಳಿ ಮಾಡಿದವು. ಈ ಘಟನೆಗಳಿಂದಾಗಿ ಬೀದಿನಾಯಿಗಳ ಸಮಸ್ಯೆಯು ಒಮ್ಮಿಂದೊಮ್ಮಿಗೇ ಭೂತಾಕಾರದಲ್ಲಿ ಗೋಚರಿಸತೊಡಗಿದೆ.
ಆದರೆ, ಬೀದಿನಾಯಿಗಳನ್ನು ನಿರ್ಮೂಲನೆ ಮಾಡುವಲ್ಲಿ ಸ್ಥಳೀಯಾಡಳಿತಗಳು ಕೂಡಲೇ ಕಾರ್ಯಪ್ರವೃತ್ತವಾಗುತ್ತವೆಯೆಂದು ಜನಸಾಮಾನ್ಯರು ಹೊಂದಿದ್ದ ಆಸೆಗಳು ನಿಧಾನವಾಗಿ ಕರಗಲಾರಂಭಿಸಿವೆ. ಮಕ್ಕಳ ಮೇಲೆ ಅತ್ಯಾಚಾರ ಮಾಡಿ ಕೊಂದು ಅವರ ದೇಹಗಳನ್ನು ಚರಂಡಿಗೆ ಎಸೆದವರ ಬಗ್ಗೆ ಕಾನೂನು ಪಾಲಕರು ಮೃದುವಾಗಿದ್ದಾರೆಂಬ ವರದಿಗಳು ದೇಶದ ರಾಜಧಾನಿಯಿಂದ ಬಂದರೆ, ಶಿಶುಹಂತಕ ನಾಯಿಗಳನ್ನು ಕೊಲ್ಲುವುದಕ್ಕೆ ಕಾನೂನಿನ ಅಡಚಣೆಯಿದೆಯೆಂದು ಸರಕಾರವು ಹಿಂದೇಟು ಹಾಕುತ್ತಿರುವುದು ನಮ್ಮ ರಾಜ್ಯದ ರಾಜಧಾನಿಯಲ್ಲಿ ವ್ಯಕ್ತವಾಗುತ್ತಿದೆ. ಒಟ್ಟಿನಲ್ಲಿ, ನಮ್ಮ ದೇಶದಲ್ಲಿ ಮುಗ್ಧ ಮಕ್ಕಳ ಜೀವಕ್ಕೆ ಬೆಲೆಯೇ ಇಲ್ಲದಂತೆ ತೋರುತ್ತಿದೆ. ನಿತಾರಿಯಲ್ಲಿ ಕೊಲ್ಲಲ್ಪಟ್ಟು ಚರಂಡಿ ಸೇರಿದ ಮಕ್ಕಳೂ, ಬೆಂಗಳೂರಿನ ಬೀದಿಗಳಲ್ಲಿ ನಾಯಿಗಳ ಬಾಯಿಗೆ ಸಿಕ್ಕಿ ಜೀವ ತೆತ್ತ ಮಕ್ಕಳೂ ತೀರಾ ಸಾಮಾನ್ಯ ಜನವರ್ಗಕ್ಕೆ ಸೇರಿದವರೆನ್ನುವುದೂ, ಯಾವುದೇ ಮಂತ್ರಿಮಾಗಧರ ಮಕ್ಕಳಾಗಲೀ, ಜಾಗತೀಕರಣದಿಂದ ಸಿರಿವಂತರಾದವರ ಮಕ್ಕಳಗಲೀ ಈ ರೀತಿಯಾಗಿ ಪ್ರಾಣ ಕಳೆದುಕೊಂಡಿಲ್ಲವೆನ್ನುವುದೂ, ಬೀದಿನಾಯಿಗಳ 'ರಕ್ಷಣೆಗೆ' ಕಟಿಬದ್ಧರಾಗಿರುವ ಪ್ರಾಣಿ ದಯಾ ಸಂಘಗಳಲ್ಲಿ ಬಡವರಾರೂ ಇಲ್ಲವೆನ್ನುವುದೂ ಕೇವಲ ಕಾಕತಾಳೀಯವಾಗಿರಲಾರದು.

ಭಾರತದಲ್ಲಿರುವಷ್ಟು ಬೀದಿನಾಯಿಗಳು ಜಗತ್ತಿನಲ್ಲೇ ಎಲ್ಲೂ ಇಲ್ಲವೇನೋ! ಗೂಗಲ್ ಜಾಲತಾಣದಲ್ಲಿ ಬೀದಿನಾಯಿಗಳ ಉಪಟಳದ ಬಗ್ಗೆ ಹುಡುಕಿದರೆ ಉದ್ದಕ್ಕೂ ಪಟ್ಟಿಯಾಗುವುದು ಭಾರತದ ವರದಿಗಳೇ! ನಮ್ಮ ದೇಶದಲ್ಲಿ ಎರಡೂವರೆ ಕೋಟಿಗೂ ಮಿಕ್ಕಿ ಬೀದಿನಾಯಿಗಳಿವೆಯೆಂದು ಅಂದಾಜು. ಅದಕ್ಕೆ ಸರಿಯಾಗಿ, ನಮ್ಮ ದೇಶದಲ್ಲಿ ವರ್ಷವೊಂದಕ್ಕೆ ೨೦೦೦೦ಕ್ಕೂ ಹೆಚ್ಚು ಜನರು ಹುಚ್ಚುನಾಯಿ ಕಡಿತದಿಂದ ಉಂಟಾಗುವ ರೇಬೀಸ್ ರೋಗದಿಂದಾಗಿ ಸಾವನ್ನಪ್ಪುತ್ತಿದ್ದಾರೆ, ಇದು ಜಗತ್ತಿನೆಲ್ಲೆಡೆಯಿಂದ ವರದಿಯಾಗುವ ರೇಬೀಸ್ ಪ್ರಕರಣಗಳ ಶೇ.80 ರಷ್ಟಾಯಿತು! ಇಷ್ಟೆಲ್ಲ ಇದ್ದರೂ ನಾವೇಕೆ ಈ ನಾಯಿಗಳ ಬಗ್ಗೆ ಮೃದುವಾಗಿದ್ದೇವೆ?

ಬೆಂಗಳೂರಿನ ಅನಾಹುತದ ನಂತರ, ಸಾರ್ವಜನಿಕರ ಆರೋಗ್ಯಪಾಲನೆಯನ್ನು ಮಾಡಬೇಕಾದ ಆಡಳಿತವೂ, ಬೀದಿನಾಯಿಗಳನ್ನು ನಿರ್ಮೂಲನೆ ಮಾಡಗೊಡದ ಪ್ರಾಣಿ ದಯಾ ಸಂಘಟನೆಗಳವರೂ ಜನರೆದುರು ಉತ್ತರಿಸಬೇಕಾಗಿ ಬಂದಿದೆ. ಭಾರತದಲ್ಲಿ ಬೀದಿನಾಯಿಗಳನ್ನು ಕೊಲ್ಲಬಾರದೆಂಬ ಕಾನೂನಿದೆಯೆಂದು ನಮ್ಮ ರಾಜ್ಯದ ಸಚಿವರುಗಳೂ, ಅಧಿಕಾರಿಗಳೂ ಹಪಹಪಿಸುತ್ತಿರುವುದು ಈಗಾಗಲೇ ವರದಿಯಾಗಿದೆ. ಈ ಕಾನೂನಿನಿಂದ ಬಿಡುಗಡೆ ಹೇಗೆಂದು ಅರಿಯಲು ದಿಲ್ಲಿಗೂ ಪತ್ರ ಬರೆಯಲಾಗಿದೆಯಂತೆ. ಇನ್ನೊಂದೆಡೆ, ಪ್ರಾಣಿ (ಬೀದಿನಾಯಿ) ಹತ್ಯೆ ಮಾಡಲೇಬಾರದು, ಅದು ಕಾನೂನು ಪ್ರಕಾರವೂ ನಿಷಿಧ್ಧವಾಗಿದೆಯೆಂದು ಪ್ರಾಣಿ ದಯಾ ಸಂಘಟನೆಗಳವರು ಘಂಟಾಘೋಷವಾಗಿ ಹೇಳುತ್ತಿದ್ದಾರೆ. ಬೀದಿನಾಯಿಗಳನ್ನು ನಿಯಂತ್ರಿಸಲು ತಮ್ಮ ಉಸ್ತುವಾರಿಯಲ್ಲಿ ಅವುಗಳಿಗೆ ಸಂತಾನಹರಣ ಚಿಕಿತ್ಸೆಯನ್ನು ನಡೆಸುವುದೊಂದೇ ಉಪಾಯವಾಗಿದೆಯೆಂದು ಪ್ರಾಣಿ ದಯಾ ಸಂಘಟನೆಗಳವರು ಹೇಳಿಕೊಳ್ಳುತ್ತಿದ್ದಾರೆ. ಬೀದಿನಾಯಿಗಳನ್ನು ಕೊಲ್ಲುವುದಿರಲಿ, ಅವುಗಳಿಗೆ ಸಂತಾನಹರಣ ಚಿಕಿತ್ಸೆ ಮಾಡಬೇಕಿದ್ದರೂ ದಯಾಮಯವಾಗಿ, ನೋವಾಗದಂತೆ ಮಾಡಬೇಕೆಂಬ ನಿಯಮಗಳಿವೆ, ಈ ಮಹಾನ್ ದೇಶದ ಕಾನೂನೇ ಬೀದಿನಾಯಿಗಳಿಗೆ ಹೀಗೆ ರಕ್ಷಣೆಯನ್ನು ಒದಗಿಸಿರುವಾಗ ಯಾರೇನು ಮಾಡಲು ಸಾಧ್ಯ ಎನ್ನುವುದು ಇವರೆಲ್ಲರ ಅಂಬೋಣ.

ಹಾಗಾದರೆ, ಪ್ರಾಣಿ ದಯಾ ಸಂಘಟನೆಗಳವರು ಬೀದಿನಾಯಿಗಳಿಗೆ ಸಂತಾನಹರಣ ಚಿಕಿತ್ಸೆಯನ್ನು ನಡೆಸುತ್ತಿದ್ದಾರೆಯೇ? ಕಳೆದ ಒಂದು ವರ್ಷದಲ್ಲೇ ಸುಮಾರು ೫೦೦೦೦ ಬೀದಿನಾಯಿಗಳನ್ನು ಸಂತಾನಹರಣ ಚಿಕಿತ್ಸೆಗೊಳಪಡಿಸಲು ಸರಕಾರವು ಪ್ರಾಣಿ ದಯಾ ಸಂಘಟನೆಗಳಿಗೆ ರೂ. ೧.೫ ಕೋಟಿಯಷ್ಟನ್ನು ನೀಡಿದ್ದು, ಈ ಕೆಲಸವು ಅಪೇಕ್ಷೆಯಂತೆ ನಡೆದಿಲ್ಲವೆಂದೂ, ಆ ಬಗ್ಗೆ ಉನ್ನತ ತನಿಖೆಯು ನಡೆಯುತ್ತಿದೆಯೆಂದೂ ಮಾನ್ಯ ಆರೋಗ್ಯ ಸಚಿವರು ಹೇಳಿರುವುದು ಪತ್ರಿಕೆಗಳಲ್ಲಿ ವರದಿಯಾಗಿದೆ. ಬೀದಿನಾಯಿಗಳನ್ನು ನಿಯಂತ್ರಿಸುವಲ್ಲಿ ತಾವು ಎಲ್ಲಾ ಪ್ರಯತ್ನಗಳನ್ನು ಮಾಡಿದ್ದೇವೆ, ಅವುಗಳ ಸಂತಾನಹರಣ ಶಸ್ತ್ರಚಿಕಿತ್ಸೆಯನ್ನು ಮಾಡಿ ಅವುಗಳನ್ನು 'ಎಲ್ಲಿಂದ ಹಿಡಿದೆವೋ, ಅಲ್ಲೇ' ಪ್ರೀತಿಯಿಂದ ಮತ್ತೆ ಬಿಟ್ಟಿದ್ದೇವೆ ಎಂದು ಪ್ರಾಣಿ ದಯಾ ಸಂಘಟನೆಗಳವರು ಹೇಳುತ್ತಿದ್ದಾರೆ. ಆದರೆ ಬೀದಿನಾಯಿಗಳ ಸಂಖ್ಯೆಯೇನೂ ಕಡಿಮೆಯಾಗಿಲ್ಲವಲ್ಲ? ಇಲ್ಲ, ಅದೇಕೆಂದರೆ, ನವಜಾತ ಹೆಣ್ಣು ನಾಯಿಮರಿಗಳನ್ನು ನಾಗರಿಕರು ಬೀದಿಗೆ ಬಿಡುತ್ತಿದ್ದಾರಂತೆ ಮತ್ತು ಈ ಹೆಣ್ಣು ನಾಯಿಗಳು ಇನ್ನಷ್ಟು ಮರಿಗಳನ್ನು ಹಾಕುತ್ತಿವೆಯಂತೆ. ಅರೆ! ಬೀದಿನಾಯಿಗಳಿಗೆಲ್ಲ ಸರಕಾರಿ ಖರ್ಚಿನಲ್ಲಿ ಸಂತಾನಹರಣವಾದ ನಂತರವೂ, ಈ ಹೊಸ ಹೆಣ್ಣು ಮರಿಗಳು ಅದೆಂತು ಬಸುರಾಗುತ್ತವೆಯೆನ್ನುವುದು ಸೋಜಿಗವೇ! ಏನೇ ಇರಲಿ, ಈ ಮತ್ತೆ ಬಿಡಲ್ಪಟ್ಟ, ಹೊಸದಾಗಿ ಸೇರಲ್ಪಟ್ಟ ಮತ್ತು ಅವುಗಳಿಂದ ಹುಟ್ಟಲ್ಪಟ್ಟ ನಾಯಿಗಳು ಎಲ್ಲ ಒಟ್ಟು ಸೇರಿ ಏನಿಲ್ಲವೆಂದರೂ ಸರಾಸರಿ ಹತ್ತು ವರ್ಷಗಳ ಕಾಲ ಬಾಳುತ್ತವೆ, ದಾರಿಯಲ್ಲಿ ನಾವೆಲ್ಲರೂ 'ಸರಕಾರವು ಸ್ವಚ್ಚ ಮಾಡಿಕೊಳ್ಳಲಿ' ಎಂದು ಪ್ರೀತಿಯಿಂದ ಹೊರಗೆಸೆದ ತಿನಸುಗಳನ್ನು ತಿಂದು ಕೊಬ್ಬುತ್ತವೆ. ಇಂತಹ ನಾಯಿಗಳು ಹಸಿವಾದಾಗ ನಮ್ಮ ಮೇಲೆ, ಅದರಲ್ಲೂ ಮುಗ್ಧ ಮಕ್ಕಳ ಮೇಲೆ, ಬಂದೆರಗಿದರೆ ಅದಕ್ಕೇನು ಮಾಡೋಣ? ಅವುಗಳು ಮನುಷ್ಯರನ್ನು ಕಚ್ಚದಂತೆ, ಮಕ್ಕಳನ್ನು ಹರಿದು ಕೊಲ್ಲದಂತೆ ತರಬೇತಿ ನೀಡೋಣವೆಂದರೆ ಪ್ರಾಣಿ ದಯಾ ಸಂಘಟನೆಗಳಿಗೆ ಇನ್ನಷ್ಟು ಹಣವನ್ನು ನೀಡಬೇಕಾಗಬಹುದು. ರೇಬೀಸ್ ಹರಡದಂತೆ ಈ ಎಲ್ಲಾ ನಾಯಿಗಳಿಗೂ ಪ್ರತಿ ವರ್ಷ ಲಸಿಕೆಯನ್ನೂ ಹಾಕಿಸಬೇಕು, ಅದಕ್ಕೂ ಖರ್ಚಿದೆ. ಛೆ, ಎಂತಹ ಪೀಕಲಾಟವಿದು!

ಇನ್ನು ನಮ್ಮ ಮಕ್ಕಳ ಪಾಡು ನೋಡಿ. ನಗರ ಪ್ರದೇಶಗಳಲ್ಲಿ ಬೆಳೆಯುತ್ತಿರುವ ಮಕ್ಕಳಲ್ಲಿ ಬೊಜ್ಜು, ಮಧುಮೇಹ ಇವೇ ಮುಂತಾದ ತೊಂದರೆಗಳು ಇತ್ತೀಚಿನ ವರ್ಷಗಳಲ್ಲಿ ವಿಪರೀತವಾಗಿ ಹೆಚ್ಚುತ್ತಿರುವುದು ಕಳವಳಕಾರಿಯಾಗಿದೆ. ಮಕ್ಕಳು ಆರೋಗ್ಯವಂತರಾಗಿ ಬೆಳೆಯಬೇಕಾದರೆ ಕನಿಷ್ಠ ದಿನಕ್ಕೊಂದು ಗಂಟೆಯಾದರೂ ಆಟವಾಡಲೇ ಬೇಕು ಮತ್ತು ಆಟವಾಡುತ್ತಾ ಬೆಳೆಯುವುದು ಮಕ್ಕಳಿಗೆ ಸಹಜವಾದ ಗುಣನಡತೆಯಾಗಿದೆ. ಆದರೆ ನಗರ ಪ್ರದೇಶಗಳಲ್ಲಿ ಸ್ಥಳದ ಸಮಸ್ಯೆಯಿಂದಾಗಿ ಮಕ್ಕಳು ತಮಗೆ ಸಿಕ್ಕಿದ ಕಿರಿದಾದ ಜಾಗಗಳಲ್ಲೇ ಆಟವಾಡಲು ಹೋಗುತ್ತಾರೆ ಮತ್ತು ಹೋಗಲೇಬೇಕು. ಆದರೀಗ ಮನೆಯಿಂದ ಹೊರಗೆ ಕಾಲಿಟ್ಟರೆ ನಾಯಿಗಳು ಹರಿದು ಕೊಂದುಬಿಟ್ಟಾವೆಂಬ ಹೆದರಿಕೆಯಿಂದಾಗಿ, ಮಕ್ಕಳು ಆಟವಾಡುವುದನ್ನೇ ನಿಲ್ಲಿಸ ಬೇಕಾದೀತೇನೋ? ನಮ್ಮ ಘನ ಸರಕಾರದ ಅಪ್ಪಣೆಯೂ ಹಾಗೇ ಇದೆ: ಮಕ್ಕಳು ಬೀದಿನಾಯಿಗಳ ಬಳಿ ಹೋಗದಂತೆ ಹೆತ್ತವರು ನೋಡಿಕೊಳ್ಳಬೇಕೆಂದು ಈಗಾಗಲೇ ಸರಕಾರೀ ಜಾಹೀರಾತುಗಳು ಪ್ರಕಟವಾಗಿವೆ. ಭಲೇ! ಬೀದಿನಾಯಿಗಳ ನಿಯಂತ್ರಣಕ್ಕೆ ಕೊಟ್ಟ ಹಣಕ್ಕೇನಾಯಿತು ಎಂದು ತನಿಖೆ ಮಾಡಲಿಕ್ಕೊಂದು ಆಯೋಗ, ಮಕ್ಕಳನ್ನೆಲ್ಲ ಮನೆಯೊಳಗೆ ಕಟ್ಟಿ ಹಾಕಿರೆಂದು ಹೆತ್ತವರಿಗೆ ಅಪ್ಪಣೆ! ಬೀದಿನಾಯಿಗಳನ್ನು ನಿಯಂತ್ರಿಸಲಿಕ್ಕಾಗದೆ ರಸ್ತೆಗಳಲ್ಲೆಲ್ಲ ಅವುಗಳು ನಿರಾಯಾಸವಾಗಿ ಸುತ್ತಬಹುದು, ಯಾರನ್ನೂ ಕಚ್ಚಬಹುದು, ಕಚ್ಚಿಸಿಕೊಂಡರೆ ಅದು ಕಚ್ಚಿಸಿಕೊಂಡವನ ಅಪರಾಧವೇ ಸರಿ! ಇನ್ನು ನಮ್ಮ ಮಕ್ಕಳು ಮನೆಯಿಂದ ಹೊರಗಿಳಿದು ಆಟವಾಡುವಂತೆ, ಬೀದಿಹೋಕರು ದಾರಿಯಲ್ಲಿ ಸುರಕ್ಷಿತವಾಗಿ ನಡೆದಾಡುವಂತೆ ಅವಕಾಶವನ್ನೊದಗಿಸಲು ಈ ಸರಕಾರಕ್ಕೆ ಸಾಧ್ಯವಿಲ್ಲವೆಂದಾಯಿತು, ಮಕ್ಕಳ ಬೆಳವಣಿಗೆಗೆ ತೊಂದರೆಯಾಗಿ ಬೊಜ್ಜು ಇತ್ಯಾದಿ ಬಂದರೇನಂತೆ? ಮನುಷ್ಯನೊಬ್ಬ ಕೊಲೆ ಮಾಡಿದರೆ ಮರಣದಂಡನೆಗೀಡಾಗಬಹುದು, ಆದರೆ ನಮ್ಮ ಬೀದಿನಾಯಿಗಳು ಅಂತಹ ಭಯವಿಲ್ಲದೆ ಯಾರನ್ನೇ ಕಚ್ಚಿ ಕೊಲ್ಲಬಹುದು! ಏಕೆಂದರೆ ನಮ್ಮ ದೇಶದ ಕಾನೂನೇ ಹಾಗಿದೆ!

ಹೌದೆ? ನಮ್ಮ ಈ ಮಹಾನ್ ದೇಶದ ಕಾನೂನು ಅಷ್ಟೊಂದು ಹೃದಯ ಹೀನವೇ? ಬೀದಿನಾಯಿಗಳಿಗೆ ನಮ್ಮ ಕಾನೂನಿನಲ್ಲಿ ಅಷ್ಟೊಂದು ರಕ್ಷಣೆಯಿದೆಯೇ?

1. ಈ ದೇಶದ ಪ್ರತಿಯೋರ್ವ ನಾಗರಿಕನಿಗೂ, ಮಕ್ಕಳಿಗೂ ಸಹ, ಜೀವಿಸುವ ಮೂಲಭೂತವಾದ ಹಕ್ಕು ಇದೆಯೆಂದು ಸಂವಿಧಾನದ ೨೧ನೇ ವಿಧಿಯಲ್ಲಿ ಹೇಳಲಾಗಿದೆ.
2. ಕರ್ನಾಟಕ ನಗರಸಭೆಗಳ ಕಾಯಿದೆ ೧೯೬೪ (೧೯೯೫ರಲ್ಲಿ ಪರಿಷ್ಕೃತ)ರ ಭಾಗ ೮೭ (ಪಿ)ಯ ಪ್ರಕಾರ ನಗರಸಭೆಯ ವ್ಯಾಪ್ತಿಯೊಳಗೆ ನಾಯಿಗಳನ್ನು ನಿರ್ಮೂಲನೆ ಮಾಡುವ ಅಥವಾ ಕೂಡಿಡುವುದಕ್ಕೆ ಬೇಕಾದ ಸಂಪನ್ಮೂಲಗಳನ್ನು ಒದಗಿಸುವುದು ನಗರಸಭೆಗಳ ಆದ್ಯ ಕರ್ತವ್ಯವಾಗಿದೆ.
3. ಇದೇ ಕಾಯಿದೆಯ ಭಾಗ ೨೨೨ (೧) ಮತ್ತು (೨)ರ ಪ್ರಕಾರ, ವಾರೀಸುದಾರರಿಲ್ಲದೇ ತಿರುಗಾಡುತ್ತಿರುವ ನಾಯಿಗಳನ್ನು ಹಿಡಿದು ನಿರ್ಮೂಲನೆ ಮಾಡಬೇಕು.
4.ಸಾರ್ವಜನಿಕವಾಗಿ ತೊಂದರೆಯುಂಟು ಮಾಡುವ ಯಾವುದೇ ಪ್ರಾಣಿಗಳನ್ನು, ಬೀದಿನಾಯಿಗಳು ಮತ್ತು ವಾರೀಸುದಾರರಿಲ್ಲದ ನಾಯಿಗಳನ್ನೂ ಸಹ, ಕೂಡಿಡುವುದು ಅಥವಾ ಕೊಲ್ಲುವುದು ನಗರಾಡಳಿತಗಳ ಆದ್ಯ ಕರ್ತವ್ಯವೆಂದು ಕರ್ನಾಟಕ ನಗರಾಡಳಿತ ಕಾಯಿದೆ ೧೯೭೬ರ ಭಾಗ ೫೭(೧೨)ರಲ್ಲಿ ಹೇಳಿದೆ.
5.ಇದೇ ಕಾಯಿದೆಯ ಭಾಗ ೩೪೫ರ ಪ್ರಕಾರ, ತೆರಿಗೆಯನ್ನು ವಿಧಿಸಿಲ್ಲದ ನಾಯಿಗಳನ್ನು ಖಂಡಿತವಾಗಿ ಕೊಲ್ಲಬೇಕು.
6.೧೯೬೦ರ ಪ್ರಾಣಿ ಹಿಂಸೆ ತಡೆಗಟ್ಟುವ ಕಾಯಿದೆಯ ಭಾಗ ೧೧(೧)ರ ಪ್ರಕಾರ, ಬೀದಿನಾಯಿಗಳೂ ಸೇರಿದಂತೆ ಯಾವುದೇ ಪ್ರಾಣಿಯನ್ನು ಕೇವಲ ಮನರಂಜನೆಯ ಉದ್ದೇಶದಿಂದ ಕೊಲ್ಲುವುದನ್ನು ನಿರ್ಬಂಧಿಸಲಾಗಿದೆ, ಅಷ್ಟೆ. ಇದೇ ಕಾಯಿದೆಯ ಭಾಗ ೧೧(೩)(ಬಿ) ಮತ್ತು (೧)ರ ಪ್ರಕಾರ ನಗರಾಡಳಿತಗಳು ಬೀದಿನಾಯಿಗಳನ್ನು ಕೊಲ್ಲುವುದಕ್ಕೆ ಯಾವುದೇ ನಿರ್ಬಂಧಗಳಿಲ್ಲ.
7.ಇನ್ನು ೨೦೦೧ರ ಪ್ರಾಣಿಗಳ (ನಾಯಿಗಳ) ಸಂತಾನಹರಣ ನಿಯಮಗಳು ಸಂತಾನಹರಣ ಚಿಕಿತ್ಸೆಯನ್ನು ಹೇಗೆ ನಡೆಸಬೇಕೆಂಬುದಕ್ಕೆ ಮಾತ್ರ ಸೀಮಿತವಾಗಿವೆ.
[ಆಕರಗಳು ಇಲ್ಲಿವೆ:
೧. ೧೯೬೦ರ ಪ್ರಾಣಿ ಹಿಂಸೆ ತಡೆ ಕಾನೂನು http://www.rajasthan.gov.in/Act1960n.pdf
೨. ೨೦೦೧ರ ನಾಯಿಗಳ ಸಂತಾನಹರಣ ನಿಯಮ http://www.karmayog.com/dogs/dogcontrolrules.htm
೩. ನಗರಪಾಲಿಕೆಗಳಲ್ಲಿ ರೇಬೀಸ್ ಮತ್ತು ಬೀದಿನಾಯಿಗಳ ನಿಯಂತ್ರಣ http://www.karmayog.com/dogs/straydogs_rabies.htm]

ಇವೆಲ್ಲವುಗಳಿಗೆ ವ್ಯತಿರಿಕ್ತವಾಗಿ, ಬೀದಿನಾಯಿಗಳನ್ನು ಕೊಲ್ಲಲೇಬಾರದೆಂದು ಹೇಳುವ ಬೇರೆ ಯಾವುದಾದರೂ ಕಾನೂನು ಈ ದೇಶದಲ್ಲಿದೆಯೇ?

ಈ ದೇಶದ ಯಾವ ಕಾನೂನು ಈ ರಾಕ್ಷಸೀ ಗುಣದ ಬೀದಿನಾಯಿಗಳನ್ನು ಕೊಲ್ಲುವುದಕ್ಕೆ ಅಡ್ಡಿಯಾಗಿದೆಯೆಂಬ ಬಗ್ಗೆ ನಮ್ಮ ಘನತೆವೆತ್ತ ಸರಕಾರವೂ, ಬೀದಿನಾಯಿಗಳ ಬಗ್ಗೆ ಅಪಾರವಾದ ಮಮತೆಯುಳ್ಳವರೂ ತಿಳಿಯಹೇಳಿದರೆ ಒಳ್ಳೆಯದು. ಈ ಉತ್ತರವನ್ನು ಈ ನಾಡಿನ ಜನತೆ ಎದುರು ನೋಡುತ್ತಿದ್ದಾರೆ. ಇಲ್ಲದಿದ್ದರೆ, ಕುರ್ಚಿ ಹಿಡಿದಿರುವ ಡೊಂಕು ಬಾಲದ (ಎಂದೆಂದಿಗೂ ಜನಪರವಾಗಿರಲಾರದ) ನಾಯಕರು ಮತ್ತವರ ಜೊತೆಗೆ ಇನ್ನೂ ಯಾರು ಯಾರು, ಏನೇನು 'ಊಟವನ್ನು', ಈ ಹೆಸರಿಲ್ಲದ, ಗುರುತಿಲ್ಲದ, ಲೆಕ್ಕಕ್ಕೆ ಸಿಗದ ನಾಯಿಗಳ ಹೆಸರಲ್ಲಿ ಸವಿದಿದ್ದಾರೆಂದು ಈ ನಾಡಿನ ಜನತೆ ತಿಳಿಯಬಯಸುತ್ತಾರೆ. ಏಕೆಂದರೆ ನಮ್ಮೆಲ್ಲರಿಗೆ ಬೀದಿನಾಯಿಗಳಿಂದ ಸುರಕ್ಷಿತರಾಗಿ ಬದುಕುವ ಹಕ್ಕು ಇದ್ದೇ ಇದೆ. ಪ್ರಾಣಿಗಳ (ಅದರಲ್ಲೂ ಬೀದಿನಾಯಿಗಳ) ಬಗ್ಗೆ ಅತಿ ವಿಶೇಷವಾದ ಮಮತೆಯಿರುವವರೆಲ್ಲರಿಗೂ ಮನುಷ್ಯನೆಂಬ ಪ್ರಾಣಿಯ ಬಗೆಗೂ ತುಸು ಕಾಳಜಿಯಿರಲಿ ಎಂದು ನಾವೆಲ್ಲ ಆಶಿಸುತ್ತೇವೆ.