ದಕ್ಷಿಣ ಕನ್ನಡ ಜಿಲ್ಲೆಯ ಬಹು ಭಾಗಗಳಿಗೆ ಚಿಕುನ್ ಗುನ್ಯಾ ಸೋಂಕು ವ್ಯಾಪಿಸಿದ್ದು, ಕೆಲವೊಂದು ಸಾವಿನ ಪ್ರಕರಣಗಳೂ ವರದಿಯಾಗಿವೆ. ಅದರ ಜೊತೆಗೆ, ಕೆಲವೆಡೆಗಳಲ್ಲಿ ಡೆಂಗೀ, ಇಲಿ ಜ್ವರ ಹಾಗೂ ಮಲೇರಿಯಾ ರೋಗಗಳು ಕೂಡಾ ಹರಡುತ್ತಿರುವ ಬಗ್ಗೆ ಪತ್ರಿಕೆಗಳಲ್ಲಿ ವರದಿಯಾಗಿದೆ. ಇದರಿಂದಾಗಿ ಜನಸಾಮಾನ್ಯರಲ್ಲಿ ವಿಪರೀತವಾದ ಭಯ ಹಾಗೂ ಆತಂಕಗಳಿಗೆ ಮತ್ತು ವೈದ್ಯಕೀಯ ಸಮುದಾಯದಲ್ಲಿ ಹಲವಾರು ಗೊಂದಲಗಳಿಗೆ ಕಾರಣವಾಗಿದೆ. ಈ ಎಲ್ಲ ಸೋಂಕು ರೋಗಗಳನ್ನು ಸರಿಯಾಗಿ ಗುರುತಿಸಿ, ಸೂಕ್ತವಾದ ಚಿಕಿತ್ಸೆಯನ್ನು ನೀಡಲು ನೆರವಾಗಬಲ್ಲ ಸರಳ ಸೂತ್ರಗಳ ತುರ್ತು ಅಗತ್ಯವಿರುವುದರಿಂದ, ಲಭ್ಯವಿರುವ ವೈಜ್ಞಾನಿಕ ಮಾಹಿತಿಯ ಆಧಾರದಲ್ಲಿ, ಈ ಕೆಳಗಿನ ಸಲಹೆಗಳನ್ನು ನೀಡಬಯಸುತ್ತೇವೆ:
ಚಿಕುನ್ ಗುನ್ಯಾ, ಡೆಂಗೀ, ಇಲಿ ಜ್ವರ ಹಾಗೂ ಮಲೇರಿಯಾ ರೋಗಗಳ ಲಕ್ಷಣಗಳಲ್ಲಿ ಹಲವಾರು ಸಾಮ್ಯತೆಗಳಿದ್ದು, ಮೇಲ್ನೋಟದಲ್ಲಿ ಇವನ್ನು ಪ್ರತ್ಯೇಕವಾಗಿ ಗುರುತಿಸುವುದು ಸುಲಭವಾಗದು. ಜ್ವರ, ಸಂಧಿ ನೋವು ಹಾಗೂ ದಡಿಕೆಗಳು ಚಿಕುನ್ ಗುನ್ಯಾ, ಡೆಂಗೀ ಹಾಗೂ ಇಲಿ ಜ್ವರಗಳಿಗೆ ಸಾಮಾನ್ಯವಾದ ಲಕ್ಷಣಗಳಾಗಿವೆ. ಚಿಕುನ್ ಗುನ್ಯಾ ಮತ್ತು ಡೆಂಗೀ ಸೋಂಕುಗಳೆರಡರಲ್ಲೂ ಜ್ವರವು ಒಮ್ಮಿಂದೊಮ್ಮಿಗೇ ತೊಡಗಿ, 1-2 ದಿನಗಳಲ್ಲಿ ಇಳಿದು ಮತ್ತೆ ಒಂದೆರಡು ದಿನಗಳ ಬಳಿಕ ಮರುಕಳಿಸಿ 1-2 ದಿನಗಳಲ್ಲಿ ಕಡಿಮೆಯಾಗುತ್ತದೆ, ಒಟ್ಟಾರೆಯಾಗಿ 5-6 ದಿನಗಳಲ್ಲಿ ಜ್ವರವು ತನ್ನಿಂತಾನೇ ವಾಸಿಯಾಗುತ್ತದೆ. ಡೆಂಗೀ ಜ್ವರದಲ್ಲಿ ವಿಪರೀತವಾದ ತಲೆನೋವು, ಸಂಧಿಗಳಲ್ಲಿ ನೋವು, ಮೈ-ಕೈಗಳ ಸ್ನಾಯುಗಳಲ್ಲಿ ನೋವು ಹಾಗೂ ಕಣ್ಣಾಲಿಗಳಲ್ಲಿ ನೋವಿರುತ್ತದೆ. ಚಿಕುನ್ ಗುನ್ಯಾ ಜ್ವರದಲ್ಲಿ ಸಂಧಿಗಳಲ್ಲಿ ನೋವು ಹಾಗೂ ಬಾವು ವಿಶೇಷವಾಗಿ ಕಂಡು ಬರುತ್ತದೆ. ಚಿಕುನ್ ಗುನ್ಯಾದಲ್ಲಿ ಮುಖ ಹಾಗೂ ಎದೆಯ ಭಾಗಗಳಲ್ಲಿ ಕೆಂಪನೆಯ ನವಿರಾದ ದಡಿಕೆಯು ಜ್ವರ ತೊಡಗಿದ ಒಂದೆರಡು ದಿನಗಳಲ್ಲಿ ಕಾಣಿಸಿಕೊಳ್ಳುತ್ತದೆ. ಡೆಂಗೀ ಜ್ವರದಲ್ಲಿ, 3-4 ದಿನಗಳಲ್ಲಿ ಎದೆ, ಹೊಟ್ಟೆ ಹಾಗೂ ಕಾಲುಗಳಲ್ಲಿ ದಡಿಕೆಗಳು ಕಂಡುಬರುತ್ತವೆ ಮತ್ತು ಕೆಲವರಲ್ಲಿ ಈ ದಡಿಕೆಗಳಡಿಯಲ್ಲಿ ರಕ್ತಸ್ರಾವವೂ ಕಂಡುಬರಬಹುದು. ಇಲಿ ಜ್ವರದಲ್ಲಿಯೂ ಒಮ್ಮಿಂದೊಮ್ಮೆಗೇ ತೊಡಗುವ ಜ್ವರ ಹಾಗೂ ಕಾಲು ಮತ್ತು ಬೆನ್ನಿನ ಸ್ನಾಯುಗಳಲ್ಲಿ ನೋವು ಸಾಮಾನ್ಯವಾದ ಲಕ್ಷಣಗಳಾಗಿರುತ್ತವೆ. ಜ್ವರವು 4-7 ದಿನಗಳ ಕಾಲ ಮುಂದುವರಿದಂತೆ ಕಣ್ಣುಗಳು ಕೆಂಪೇರುವುದು, ತಲೆನೋವು, ಕೆಮ್ಮು ಇತ್ಯಾದಿ ಲಕ್ಷಣಗಳು ಗೋಚರಿಸುತ್ತವೆ. ಮತ್ತೆ 1-3 ದಿನಗಳ ಬಿಡುವಿನ ಬಳಿಕ ಜ್ವರವು ಮರುಕಳಿಸಿ, ಕಾಮಾಲೆ, ಮೂತ್ರ ಪಿಂಡಗಳ ತೊಂದರೆ ಇವೇ ಮುಂತಾದ ಸಮಸ್ಯೆಗಳು ಗೋಚರಿಸುತ್ತವೆ ಹಾಗೂ ಜೊತೆಯಲ್ಲಿ ರಕ್ತಸ್ರಾವದಿಂದಾಗಿ ಕೆಂಪಗಿನ ದಡಿಕೆಗಳು .ಕಾಲುಗಳಲ್ಲಿ ಗೋಚರಿಸಬಹುದು. ಮಲೇರಿಯಾದಲ್ಲಿ ವಿಶೇಷವಾದ ಮೈಕೈ ನೋವಾಗಲೀ, ಸಂಧಿ ನೋವಾಗಲೀ, ದಡಿಕೆಯಾಗಲೀ ಇರುವುದಿಲ್ಲ ಹಾಗೂ ಪ್ರತಿನಿತ್ಯ ಅಥವಾ ದಿನ ಬಿಟ್ಟು ದಿನ ಜ್ವರವು ಮರುಕಳಿಸುತ್ತಿರುತ್ತದೆ, ಕೆಲವರಲ್ಲಿ ಕಾಮಾಲೆಯು ಗೋಚರಿಸಬಹುದು.
ಕೆಲವು ಸರಳವಾದ ಪರೀಕ್ಷೆಗಳು ಕೂಡಾ ರೋಗ ನಿದಾನದಲ್ಲಿ ನೆರವಾಗಬಲ್ಲವು. ಡೆಂಗೀ ಹಾಗೂ ಚಿಕುನ್ ಗುನ್ಯಾ ಜ್ವರಗಳಲ್ಲಿ ರಕ್ತದ ಬಿಳಿ ರಕ್ತ ಕಣಗಳ ಸಂಖ್ಯೆಯಲ್ಲಿ ಇಳಿಕೆಯಾಗುತ್ತದೆಯಾದರೆ, ಇಲಿಜ್ವರದಲ್ಲಿ ಅದು ಏರಿಕೆಯಾಗುತ್ತದೆ. ಇಲಿಜ್ವರದಲ್ಲಿ ಮೂತ್ರ ಪಿಂಡಗಳು ಯಾವತ್ತೂ ಸೋಂಕಿಗೆ ತುತ್ತಾಗುವುದರಿಂದಾಗಿ ಇಲಿಜ್ವರದ ರೋಗಿಗಳ ಮೂತ್ರದಲ್ಲಿ ಬದಲಾವಣೆಗಳು ಇದ್ದೇ ಇರುತ್ತವೆ ಹಾಗೂ ಇಲಿ ಜ್ವರವನ್ನು ಸಂದೇಹಿಸಲು ಮೂತ್ರ ಪರೀಕ್ಷೆಯು ಒಂದು ಸುಲಭದ ವಿಧಾನವಾಗಿದೆ. ಮಲೇರಿಯಾ ಪತ್ತೆಗಾಗಿ ರಕ್ತಲೇಪನ ಪರೀಕ್ಷೆಯನ್ನು ಮಾಡಬೇಕಾಗುತ್ತದೆ.
ಹೀಗೆ ರೋಗಲಕ್ಷಣಗಳು ಹಾಗೂ ಸರಳವಾದ ರಕ್ತ ಮತ್ತು ಮೂತ್ರಗಳ ಪರೀಕ್ಷೆಗಳಿಂದ ಈ ರೋಗಗಳನ್ನು ಗುರುತಿಸಲು ಸಾಧ್ಯವಿದೆ.
ಡೆಂಗೀ ಹಾಗೂ ಚಿಕುನ್ ಗುನ್ಯಾ ಜ್ವರಗಳು ತನ್ನಿಂತಾನೇ ಗುಣಮುಖವಾಗುವುದರಿಂದ ಹೆಚ್ಚಿನ ಚಿಕಿತ್ಸೆಯೇನೂ ಅಗತ್ಯವಿರುವುದಿಲ್ಲ. ಜ್ವರ ಅಥವಾ ಸಂಧಿ ನೋವುಗಳು ವಿಪರೀತವಾಗಿದ್ದರೆ ನೋವುನಿವಾರಕ ಔಷಧವಾದ ಪಾರಾಸಿಟಮಾಲ್ ಅನ್ನು ಬಳಸಬಹುದು. ಹೆಚ್ಚು ಶಕ್ತಿಯುತವಾದ ನೋವುನಿವಾರಕಗಳ ಬಳಕೆಯಿಂದ ಪ್ರಯೋಜನಕ್ಕಿಂತ ಹೆಚ್ಚು ಹಾನಿಯೇ ಆಗಬಹುದು. ಸ್ಟೀರಾಯ್ಡ್ ಗಳನ್ನು ಡೆಂಗೀ ಹಾಗೂ ಚಿಕುನ್ ಗುನ್ಯಾ ಜ್ವರಗಳ ಚಿಕಿತ್ಸೆಯಲ್ಲಿ ಯಾವ ಕಾರಣಕ್ಕೂ ಬಳಸಲೇ ಬಾರದು. ಚಿಕುನ್ ಗುನ್ಯಾ ರೋಗಿಗಳಲ್ಲಿ 10-15 ದಿನಗಳ ಬಳಿಕವೂ ವಿಪರೀತವಾದ ಸಂಧಿ ನೋವು ಉಳಿದುಕೊಂಡರೆ ಕ್ಲೋರೋಕ್ವಿನ್ ಔಷಧವನ್ನು ಬಳಸಬಹುದು. ಇಲಿಜ್ವರಕ್ಕೆ ಪೆನಿಸಿಲಿನ್ ಅಥವಾ ಡಾಕ್ಸಿಸೈಕ್ಲಿನ್ ಔಷಧಗಳು ಪರಿಣಾಮಕಾರಿಯಾಗಿವೆ.
ಚಿಕುನ್ ಗುನ್ಯಾ ರೋಗದಲ್ಲಿ ಮಾರಣಾಂತಿಕ ಸಮಸ್ಯೆಗಳು ಅತ್ಯಂತ ವಿರಳ. ಡೆಂಗೀ, ಇಲಿಜ್ವರ ಹಾಗೂ ಫಾಲ್ಸಿಪಾರಂ ಸೋಂಕುಗಳಿಂದ ಮಾರಣಾಂತಿಕವಾಗಬಹುದಾದ ಸಮಸ್ಯೆಗಳು ಉಂಟಾಗಬಹುದು. ಆದ್ದರಿಂದ ಈ ಕೆಳಗಿನ ಲಕ್ಷಣಗಳು ಕಾಣಿಸಿಕೊಂಡರೆ ರೋಗಿಗಳನ್ನು ಕೂಡಲೇ ಉನ್ನತ ಸೌಲಭ್ಯಗಳಿರುವ ಆಸ್ಪತ್ರೆಗೆ ದಾಖಲಿಸುವುದು ಒಳ್ಳೆಯದು:
- ರಕ್ತದೊತ್ತಡದಲ್ಲಿ ಇಳಿಕೆ
- ರಕ್ತಸ್ರಾವ
- ಉಸಿರಾಟದ ತೊಂದರೆ
- ಅರೆ ಪ್ರಜ್ಞಾವಸ್ಥೆ
- ಕಾಮಾಲೆ
- ಮೂತ್ರ ಪಿಂಡಗಳ ವೈಫಲ್ಯ
- ಅಪಸ್ಮಾರವುಂಟಾಗುವುದು
ವಿವರಗಳಿಗೆ: http://rationalmedicine.org/chikungunya-kannada.htm
ಡಾ| ಬಿ. ಶ್ರೀನಿವಾಸ ಕಕ್ಕಿಲ್ಲಾಯ,
ತಜ್ಞ ವೈದ್ಯರು, ಮಂಗಳೂರು
ಡಾ| ಬಿ. ಶಾಂತಾರಾಂ ಬಾಳಿಗಾ,
ಪ್ರೊಫೆಸರ್, ಕಸ್ತೂರ್ಬಾ ವೈದ್ಯಕೀಯ ಕಾಲೇಜು, ಮಂಗಳೂರು
ಡಾ| ಎಂ. ಚಕ್ರಪಾಣಿ,
ಪ್ರೊಫೆಸರ್, ಕಸ್ತೂರ್ಬಾ ವೈದ್ಯಕೀಯ ಕಾಲೇಜು, ಮಂಗಳೂರು
Post new comment