ಚಿಕುನ್ ಗುನ್ಯಾಕ್ಕೆ ಚಿಕಿತ್ಸೆ: ಇಲ್ಲವೋ ಅಥವಾ ಬೇಡವೋ?

ಉತ್ತರ ಕರ್ನಾಟಕದ ವಿವಿಧ ಭಾಗಗಳ ಜನರನ್ನು ಈಗಾಗಲೇ ಕಾಡಿದ ಚಿಕುನ್ ಗುನ್ಯಾ ಸೋಂಕು ಇದೀಗ ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರವೇಶಿಸಿದೆ. ಸಾವಿರಾರು ಜನ ಸೋಂಕನ್ನು ತಗಲಿಸಿಕೊಂಡಿದ್ದು, ಅದರ ನಿಯಂತ್ರಣಕ್ಕೆ ಸರಕಾರವು 'ಸಮರೋಪಾದಿಯಲ್ಲಿ' ಕಾರ್ಯಪ್ರವೃತ್ತವಾಗಿದೆ'ಯೆಂದು ಈಗಾಗಲೇ ಮಾಧ್ಯಮಗಳಲ್ಲಿ ವರದಿಯಾಗಿದೆ. ಈ ಬಗ್ಗೆ ಸರಕಾರದ ಜಾಹೀರಾತೊಂದು ನಾಡಿನ ಪ್ರಮುಖ ದೈನಿಕಗಳಲ್ಲಿ ಪ್ರಕಟವಾಗಿದೆ. ಅದರಲ್ಲಿ, ಚಿಕುನ್ ಗುನ್ಯಾ ರೋಗವು 8-10 ದಿನಗಳಲ್ಲಿ ತನ್ನಿಂದ ತಾನೇ ಗುಣ ಹೊಂದುತ್ತದೆಯೆಂದು ಒಂದೆಡೆ ಹೇಳಲಾಗಿದ್ದರೆ, ಇನ್ನೊಂದೆಡೆ ಜೀವರಕ್ಷಕ ಔಷಧಗಳ ಸರಬರಾಜನ್ನು ಮಾಡಲಾಗುತ್ತಿದೆಯೆಂದು ಹೇಳಲಾಗಿದೆ; ಅಲ್ಲದೆ ಅದರ ನಿಯಂತ್ರಣಕ್ಕೆ ಆಯುರ್ವೇದ ಮತ್ತು ಹೋಮಿಯೋಪತಿ ಔಷಧಿಗಳು ಪರಿಣಾಮಕಾರಿಯಾಗಿದ್ದು ಅವನ್ನು ಸಹ ಉಪಯೋಗಿಸಬಹುದು ಎಂದು ಹೇಳಲಾಗಿದೆ.

ಒಂದೇ ಜಾಹೀರಾತಿನಲ್ಲಿ ಪ್ರಕಟಗೊಂಡಿರುವ ಈ ವಿಭಿನ್ನವಾದ ಸರಕಾರಿ ಹೇಳಿಕೆಗಳು ಚಿಕುನ್ ಗುನ್ಯಾ ರೋಗದ ಬಗ್ಗೆ ಸರಕಾರದಲ್ಲಿರುವ (ಆರೋಗ್ಯ ಇಲಾಖೆಯ ವೈದ್ಯಾಧಿಕಾರಿಗಳಲ್ಲಿರುವ) ಗೊಂದಲವನ್ನು ಸೂಚಿಸುವುದಷ್ಟೇ ಅಲ್ಲ, ಸಾರ್ವಜನಿಕರಲ್ಲಿ ಹಲವಾರು ಸಂಶಯಗಳಿಗೂ, ಗೊಂದಲಗಳಿಗೂ ಕಾರಣವಾಗಿ, ಪ್ರಯೋಜನಕ್ಕಿಂತ ಹೆಚ್ಚು ತೊಂದರೆಯನ್ನೇ ಉಂಟುಮಾಡಬಹುದು.

ಚಿಕುನ್ ಗುನ್ಯಾ ರೋಗವು ಹೆಣ್ಣು ಈಡಿಸ್ ಸೊಳ್ಳೆಗಳಿಂದ ಹರಡಲ್ಪಡುವ ವೈರಾಣುವಿನಿಂದ ಉಂಟಾಗುವ ಸೋಂಕುರೋಗವಾಗಿದ್ದು, ಒಂದು ವಾರದಲ್ಲಿ ತನ್ನಿಂತಾನೇ ಗುಣವಾಗುತ್ತದೆ; ಅದರಿಂದಾಗಿ ಗಂಭೀರವಾದ ಸಮಸ್ಯೆಗಳಾಗಲೀ, ಸಾವುಗಳಾಗಲೀ ಉಂಟಾಗುವುದಿಲ್ಲ. ಹಾಗಿದ್ದ ಮೇಲೆ, ಅದರ ಚಿಕಿತ್ಸೆಗೆ ಜೀವರಕ್ಷಕ ಔಷಧಗಳ ಅಗತ್ಯವೇನೆಂದಾಗಲೀ, ಯಾವ ಜೀವರಕ್ಷಕ ಔಷಧಗಳನ್ನು ಸರಕಾರವು ಯಾಕಾಗಿ ಸರಬಾಜು ಮಾಡುತ್ತಿದೆಯೆಂದಾಗಲೀ ಅರ್ಥವಾಗುವುದಿಲ್ಲ. ತನ್ನಿಂದ ತಾನೇ ಗುಣವಾಗುವ ಈ ಕಾಹಿಲೆಗೆ ನಿರ್ದಿಷ್ಟ ಚಿಕಿತ್ಸೆಯ ಅಗತ್ಯವಿಲ್ಲ, ಸಂಧಿಗಳಲ್ಲಿ ವಿಪರೀತವಾದ ನೋವಿದ್ದರೆ ಸರಳವಾದ ನೋವುನಿವಾರಕಗಳನ್ನಷ್ಟೇ (ಉದಾ: ಪಾರಾಸಿಟಮಾಲ್) ಬಳಸಿದರೆ ಸಾಕಾಗುತ್ತದೆ. ಹೆಚ್ಚು ಶಕ್ತಿಯುತವಾದ ನೋವುನಿವಾರಕಗಳನ್ನಾಗಲೀ, ಸ್ಟೀರಾಯ್ಡ್ ಔಷಧಗಳನ್ನಾಗಲೀ ಬಳಸುವುದರಿಂದ ಕಾಯಿಲೆಯು ಉಲ್ಬಣಿಸುವ ಅಥವಾ ಔಷಧಗಳಿಂದಲೇ ತೊಂದರೆಗಳಾಗುವ ಸಾಧ್ಯತೆಗಳಿವೆ. ವಸ್ತುಸ್ಥಿತಿಯು ಹೀಗಿರುವಾಗ, ಆಧುನಿಕ ವೈದ್ಯಶಾಸ್ತ್ರದಲ್ಲಿ ಚಿಕುನ್ ಗುನ್ಯಾ ರೋಗಕ್ಕೆ ಚಿಕಿತ್ಸೆಯೇ ಇಲ್ಲ ಎಂದು ಹೇಳುವುದು ಸತ್ಯಕ್ಕೆ ಅಪಚಾರವಾಗುತ್ತದೆ. ಮೊನ್ನೆ ನಡೆದ ದ.ಕ. ಜಿಲ್ಲಾ ಪಂಚಾಯತ್ತಿನ ಸಭೆಯಲ್ಲಿ ಶಾಸಕರೊಬ್ಬರು, 'ವೈದ್ಯ ವಿಜ್ಞಾನ ಇಷ್ಟೆಲ್ಲ ಮುಂದುವರಿದಿದೆ, ಈ ರೋಗಕ್ಕೆ ಮದ್ದಿಲ್ಲ ಎಂದರೆ ಹೇಗೆ' ಎಂದು ಖೇದ ವ್ಯಕ್ತ ಪಡಿಸಿದರಂತೆ. 'ಚಿಕಿತ್ಸೆಯು ಇಲ್ಲ' ಎಂದಲ್ಲ, ಅದರ 'ಅಗತ್ಯವಿಲ್ಲ', ಅಷ್ಟೇ. ಇವೆರಡರ ನಡುವೆ ಅಜಗಜಾಂತರವಿದೆ. 'ಚಿಕಿತ್ಸೆಯೇ ಇಲ್ಲ' ಎಂದೊಡನೆ ರೋಗಪೀಡಿತರು ಕಂಗಾಲಾಗಿಬಿಡುವುದು ಸಹಜವೇ. 'ಅಗತ್ಯವಿಲ್ಲ' ಎಂದರೆ, ರೋಗಪೀಡಿತರಿಗೆ ಧೈರ್ಯ ತುಂಬುತ್ತದೆ, ರೋಗವು ಗುಣಹೊಂದುವ ಬಗ್ಗೆ ಆತ್ಮವಿಶ್ವಾಸ ಮೂಡುತ್ತದೆ.

ರೋಗನಿಯಂತ್ರಣಕ್ಕೆ ಆಯುರ್ವೇದ ಮತ್ತು ಹೋಮಿಯೋಪತಿ ಔಷಧಿಗಳು ಪರಿಣಾಮಕಾರಿಯಾಗಿವೆ ಎಂಬ ಸರಕಾರದ ಹೇಳಿಕೆಗೆ ಆಧಾರಗಳೇನು ಎನ್ನುವುದು ಸ್ಪಷ್ಟವಿಲ್ಲ.
ವಿಶ್ವ ಆರೋಗ್ಯ ಸಂಸ್ಥೆ
ಯಾಗಲೀ, ಭಾರತದ ರಾಷ್ಟ್ರೀಯ ಕೀಟಜನ್ಯ ರೋಗ ನಿಯಂತ್ರಣ ಕಾರ್ಯಕ್ರಮದಲ್ಲಾಗಲೀ ಈ ಬಗ್ಗೆ ಮಾಹಿತಿಯಿಲ್ಲ. ಹಾಗಿರುವಾಗ, ಈ ಔಷಧಗಳನ್ನು ಸರಕಾರವು ಪೂರೈಸುವುದಾಗಲೀ, ಅದನ್ನು ಬಳಸುವಂತೆ ಸಾರ್ವಜನಿಕರಿಗೆ ಹೇಳುವುದಾಗಲೀ ಸಮಂಜಸವೆನಿಸುವುದಿಲ್ಲ. ಈ ಕುರಿತು, ದ.ಕ. ಜಿಲ್ಲೆಯ ವಿಚಾರವಾದಿ ಸಂಘದಿಂದ ಜಿಲ್ಲಾ ಆರೋಗ್ಯಾಧಿಕಾರಿಗಳಿಗೊಂದು ಬಹಿರಂಗ ಪತ್ರವನ್ನು ಬರೆಯಲಾಗಿದೆ.

ಜಿಲ್ಲಾ ಆರೋಗ್ಯಾಧಿಕಾರಿಗಳಿಗೊಂದು ಬಹಿರಂಗ ಪತ್ರ

ಇತ್ತೀಚಿನ ದಿನಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕೆಲ ಭಾಗಗಳಲ್ಲಿ ಚಿಕುನ್ ಗುನ್ಯಾ ಜ್ವರವು ಹರಡುತ್ತಿರುವ ಬಗ್ಗೆ ವರದಿಯಾಗಿದೆ. ವೈರಸ್ ನಿಂದ ಉಂಟಾಗುವ ಈ ಸೋಂಕುರೋಗವು ಹೆಣ್ಣು ಈಡಿಸ್ ಈಜಿಪ್ಟೈ ಎಂಬ ಸೊಳ್ಳೆಗಳ ಮೂಲಕ ಒಬ್ಬರಿಂದೊಬ್ಬರಿಗೆ ಹರಡುತ್ತದೆಯೆನ್ನುವುದು ಸರ್ವವಿದಿತವಾಗಿದೆ. ಸೋಂಕು ತಗಲಿದವರಲ್ಲಿ ಜ್ವರ, ಸಂಧಿಗಳಲ್ಲಿ ನೋವು ಹಾಗೂ ಕೆಲವರಲ್ಲಿ ಚರ್ಮದ ಮೇಲೆ ನವಿರಾದ ದಡಿಕೆಗಳು ಕಂಡು ಬರಬಹುದಾಗಿದ್ದು ಈ ಎಲ್ಲಾ ರೋಗ ಲಕ್ಷಣಗಳೂ ಯಾವುದೇ ವಿಶೇಷ ಚಿಕಿತ್ಸೆಯಿಲ್ಲದೆಯೇ, ತನ್ನಿಂತಾನಾಗಿ, ಒಂದು ವಾರದೊಳಗೆ ವಾಸಿಯಾಗುತ್ತವೆ. ಅಪರೂಪಕ್ಕೆ ಕೆಲವರಲ್ಲಿ ಸಂಧಿಗಳ ನೋವು ಕೆಲ ವಾರಗಳವರೆಗೆ ಉಳಿದುಕೊಳ್ಳಬಹುದಾಗಿದ್ದು ತೀವ್ರ ಸ್ವರೂಪದ ನೋವಿರುವವರು ನೋವು ನಿವಾರಕ ಔಷಧಗಳನ್ನು ಸೇವಿಸಿದರೆ ಸಾಕಾಗುತ್ತದೆ. ಚಿಕುನ್ ಗುನ್ಯಾ ದಿಂದ ಯಾವುದೇ ಗಂಭೀರವಾದ ಸಮಸ್ಯೆಗಳಾಗಲೀ, ಪ್ರಾಣಹಾನಿಯಾಗಲೀ ಸಂಭವಿಸುವ ಬಗ್ಗೆ ವರದಿಗಳಿಲ್ಲ.

ಚಿಕುನ್ ಗುನ್ಯಾ ಸೋಂಕನ್ನು ತಡೆಯುವ ಲಸಿಕೆಯಾಗಲೀ ಔಷಧಗಳಾಗಲೀ ಈ ವರೆಗೆ ಲಭ್ಯವಿರುವುದಿಲ್ಲ. ಅದನ್ನು ತಡೆಯಲು ಸೊಳ್ಳೆಗಳ ನಿಯಂತ್ರಣವೊಂದನ್ನು ಬಿಟ್ಟರೆ ಬೇರಾವುದೇ ಕ್ರಮಗಳ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯಲ್ಲಾಗಲೀ, ಭಾರತದ ರಾಷ್ಟ್ರೀಯ ಕೀಟಜನ್ಯ ರೋಗ ನಿಯಂತ್ರಣ ಕಾರ್ಯಕ್ರಮದಲ್ಲಾಗಲೀ ಮಾಹಿತಿಯು ಲಭ್ಯವಿಲ್ಲ. ವಸ್ತುಸ್ಥಿತಿಯು ಹೀಗಿರುತ್ತಾ, ಚಿಕುನ್ ಗುನ್ಯಾ ರೋಗವನ್ನು ತಡೆಯಲು ಯಾವುದೋ ಔಷಧಗಳನ್ನು ಪೀಡಿತ ಪ್ರದೇಶಗಳ ಜನರಿಗೆ ಹಂಚಲಾಗುತ್ತಿದೆಯೆಂದೂ, ಅದಕ್ಕಾಗಿ ಹಲವು ಲಕ್ಷ ರೂಪಾಯಿಗಳನ್ನು ಸರಕಾರವು ವ್ಯಯಿಸುತ್ತಿದೆಯೆಂದೂ ಪತ್ರಿಕೆಗಳಲ್ಲಿ ವರದಿಯಾಗಿದೆ. ಲಭ್ಯ ಮಾಹಿತಿಗಳ ಪ್ರಕಾರ ಹೋಮಿಯೋಪತಿ ಔಷಧಗಳನ್ನು ವಿತರಿಸಲಾಗುತ್ತಿದ್ದು, ಈ ಔಷಧಗಳ ಪರಿಣಾಮ-ಅಡ್ಡಪರಿಣಾಮಗಳ ಬಗ್ಗೆಯಾಗಲೀ, ಪ್ರಯೋಜನಗಳ ಬಗ್ಗೆಯಾಗಲೀ ಯಾವುದೇ ಮಾಹಿತಿಯು ಸಂಬಂಧಿಸಿದ ಇಲಾಖೆಗಳಲ್ಲಿ ಲಭ್ಯವಿದ್ದಂತಿಲ್ಲ.

ಆದ್ದರಿಂದ ಇಂತಹಾ ಔಷಧಗಳನ್ನು ಸಾರ್ವಜನಿಕರಿಗೆ ಹಂಚುವ ಮೊದಲು ಅವುಗಳ ಉಪಯುಕ್ತತೆಯ ಬಗ್ಗೆ ವೈಜ್ಞಾನಿಕವಾದ ಅಧ್ಯಯನಗಳನ್ನು ನಡೆಸಬೇಕೆಂದೂ, ಈಗಾಗಲೇ ಅಂತಹಾ ಅಧ್ಯಯನಗಳಾಗಿದ್ದರೆ ಅವುಗಳ ವರದಿಗಳನ್ನು ಬಹಿರಂಗಪಡಿಸಬೇಕೆಂದೂ ನಾವು ಸಂಬಂಧಪಟ್ಟ ಇಲಾಖಾಧಿಕಾರಿಗಳನ್ನೂ, ಸರಕಾರವನ್ನೂ ಒತ್ತಾಯಿಸುತ್ತೇವೆ. ಅದಿಲ್ಲದಿದ್ದರೆ, ಜನರನ್ನು ಸಮಾಧಾನಪಡಿಸುವ ಹೆಸರಿನಲ್ಲಿ ಇಂತಹಾ ಅವೈಜ್ಞಾನಿಕವಾದ ತಂತ್ರಗಳ ಬಳಕೆಗೆ ಸಾರ್ವಜನಿಕರ ಹಣವನ್ನು ಪೋಲು ಮಾಡುವ ಬದಲಾಗಿ, ಜನರಿಗೆ ಚಿಕುನ್ ಗುನ್ಯದ ಹರಡುವಿಕೆಯ ಬಗ್ಗೆ ವೈಜ್ಞಾನಿಕವಾದ ಮಾಹಿತಿಯನ್ನು ಒದಗಿಸಿ, ಅದರ ಹರಡುವಿಕೆಯನ್ನು ತಡೆಯಲು ಮಾಡಬೇಕಾದ ಸೊಳ್ಳೆನಿಯಂತ್ರಣ ಕಾರ್ಯವನ್ನು ಸಮರೋಪಾದಿಯಲ್ಲಿ, ಸಮುದಾಯದ ನೆರವಿನಿಂದ ಮಾಡಲನುಗುಣವಾಗುವಂತಹಾ ಕ್ರಮಗಳನ್ನು ಈ ಕೂಡಲೇ ಕೈಗೊಳ್ಳಬೇಕೆಂದು ಈ ಮೂಲಕ ನಾವು ಒತ್ತಾಯಿಸುತ್ತೇವೆ.

ಚಿಕುನ್ ಗುನ್ಯ ಸಾಂಕ್ರಾಮಿಕ

ಕಕ್ಕಿಲಾಯರವರೇ,
ನಿಮ್ಮ ಈ ಬರಹ ಸಮ ಯೋಚಿತ ವಾಗಿದೆ ಮತ್ತು ಈ ರೋಗದ ಬಗ್ಗೆ ನಮ್ಮ ಆರೋಗ್ಯ ಇಲಾಖೆಗಳಿಗಿರುವ ತಪ್ಪು ಮಾಹಿತಿಯನ್ನು ಚೆನ್ನಾಗಿ ವಿವರಿಸಿದ್ದೀರಿ. Those who forget history are condemned to repeat it ಎಂಬುದು ಹಳೆಯ ಗಾದೆ. ಈ ಖಾಯಿಲೆಯ ವಿಷಯದಲ್ಲೊ ಹಾಗೇ ಆಗಿದೆ. ಕೇವಲ ಎರಡು ವರ್ಷದ ಹಿಂದೆ ನಮ್ಮ ರಾಜ್ಯದಲ್ಲಿ ದೊಡ್ಡ ಸಾಂಕ್ರಾಮಿಕ ಚಿಕನ್ ಗುನ್ಯ ವಾಗಿದ್ದು ಅದರಿಂದ ನಮ್ಮ ಆರೋಗ್ಯ ಇಲಾಖೆ ಏನೂ ಕಲಿತಂತಿಲ್ಲ.ಮತ್ತದೇ ಜಾಹಿರಾತು ,ತಪ್ಪು ಮಾಹಿತಿ, ಸಾಂಕ್ರಾಮಿಕವನ್ನು ಹರಡುವ ಮುಂಚೆಯೇ ತಡಿಯುವಲ್ಲಿ ಎಡವುದನ್ನು ನೋಡಿದರೆ ಹೀಗನಿಸುವುದರಲ್ಲಿ ತಪ್ಪೇನಿಲ್ಲ.
೧. ಚಿಕುನ್ ಗುನ್ಯ ಮಾರಣಾಒತಿಕವಲ್ಲ ಆದರೆ ಅದರ ಪರಿಣಾಮಾಗಳು ಗಂಭೀರ.ಇದು ಉಂಟುಮಾಡುವ ಕೀಲು ನೋವು ಅನೇಕ ದಿನಗಳವರೆಗೆ ರೋಗಿಯನ್ನು ಸತಾಯಿಸುತ್ತದೆ. ಈ ಸಾಂಕ್ರಮಿಕ ಮನೆಯ ಎಲ್ಲ ಸದಸ್ಯರಿಗೂ ಏಕಕಾಲಕ್ಕೆ ಬರುವ ಸಾಧ್ಯತೆಯಿರುವುದರಿಂದ ಇಡೀ ಮನೆ ಮಲಗಬಹುದು, ಮತ್ತು ಮಳೆಗಾಲದ ಪ್ರಾರಂಭ ದಲ್ಲೆ ಸುರುವಗುವುದರಿಂದ ಕ್ರುಷಿ ಚಟುವಟಿಕೆಯ ಮೇಲೆ ಪರಿಣಾಮ ವಾಗುತ್ತದೆ.
೨. ಕೆಲವೊಮ್ಮೆ ಇದು ನರಮಂಡಲ ದ ಮೇಲೆ ಪರಿಣಾಮ ಮಾಡಿ ಮೆದುಳುಬೇನೆಯನ್ನು ಮಾಡುವುದನ್ನು ಕಳೆದ ಸಾಂಕ್ರಾಮಿಕದಲ್ಲಿ ನೋಡಿದ್ದೆವೆ.
೩. ಚಿಕ್ಕ ಮಕ್ಕಳು ಮತ್ತು ಹಿರಿಯ ವಯಸ್ಕರಲ್ಲಿ ಇದು ಹೆಚ್ಚು ತೊಂದರೆಯನ್ನು ಮಡುತ್ತದೆ
೪.ಡೆಂಗೆ ಜ್ವರ ಮತ್ತು ಚಿಕುನ್ಗುನ್ಯ ಹರಡುವ ಸೊಳ್ಳೆ ಒಂದೇ ಆದರಿಂದ ಜೊತೆಯಲ್ಲಿ ಡೆಂಗೆ ಜ್ವರ ದ ಸಾಂಕ್ರಾಮಿಕವೂ ಪ್ರಾರಂಭ ವಾಗುವ ಸಾಧ್ಯತೆ ಯಿರುತ್ತದೆ
೫. ಇದು ಉಂಟುಮಾಡುವ ವಿಪರೀತ ಸುಸ್ತು ಮತ್ತು ನಿಸ್ತೇಜತೆ ಮತ್ತು ಕೀಲು ನೋವಿನಿಂದ ರೋಗಿ ಆಸ್ಪತ್ರೆಗೆ ಸೇರಲು ಬರುವುದರಿಂದ ಆಸ್ಪತ್ರೆಗಳ ಮೇಲೆ ಹೆಚ್ಚಿನ ಒತ್ತಡ ಬೀಳುತ್ತದೆ ಮತ್ತು ಹಾಸಿಗೆ , ಐ ವಿ ದ್ರಾವಣಗಳ ಸಾಕಷ್ಟು ಸಂಗ್ರಹ ,ಪ್ಯರಸಿತಮೊಲ್ ಮಾತ್ರೆ ಅವಶ್ಯ
೬.ಅನವಸ್ಯಕ ವಾಗಿ ಅತಿಯಾದ ನೋವಿನ ಮಾತ್ರೆ ,ಇಂಜೆಕ್ಷನ್ ಗಳು ಮೂತ್ರ ಪಿಂಡ ದ ತೊಂದರೆಯನ್ನು ಮಾಡಬಹುದು. ಈ ನಿಟ್ಟಿನಲ್ಲಿ ವೈದ್ಯರು ಜಾಗರೂಕರಾಗಿರಬೇಕು, ಕಳೆದ ಸಾಲಿನ ಚಿಕನ್ ಗುನ್ಯ ದಿಂದ ಅನೇಕರು ಈ ತೊಂದರೆಯನ್ನು ಅನುಭವಿಸಿದ್ದಾರೆ
೭.ಎದಿಸ್ ಸೊಳ್ಳೆ ಹಗಲು ಮತ್ತು ಸಂಜೆ ಕಚ್ಚುವ ಸೊಳ್ಳೆ ಮತ್ತು ನಿಂತ ಅತ್ಯಲ್ಪ ನೀರಿನಲ್ಲಿ ಬೆಳೆಯುವ ಸೊಳ್ಳೆ ,ಕೇವಲ ಔಷದ ಸಿಂಪಡಿಸುವುದರಿಂದ ಇದರ ನಿಯಂತ್ರಣ ಸಾಧವಿಲ್ಲ , ನಿಂತ ನೀರಿನ ಜಾಗವನ್ನು ತಡೆಯುವುದು ಮುಖ್ಯ
೮. ಸರ್ಕಾರ ಇತರ ಯಾವುದೇ ಔಷದ ವನ್ನು ಹಂಚುವುದಕ್ಕೊ ಮೊದಲು ಸರಿಯಾಗಿ ಮಾಹಿತಿ ಸಂಗ್ರಹಿಸದೇ ಇರುವುದು ಸರಿಯಲ್ಲ .ಅದೇ ಹಣವನ್ನು ಸೊಳ್ಳೆಗಳ ನಿಯಂತ್ರಣಕ್ಕೆ ಬಳಸುವುದು ಉಚಿತ
೯. ಚಿಕನ್ ಗುನ್ಯ ನಿಯಂತ್ರಣದಲ್ಲಿ ಖಾಸಗಿ ವೈದ್ಯರನ್ನೂ ಬಳಸಿ ಅವರ ಸಲಹೆ ,ಅನುಭವದ ಉಪಯೊಗವನ್ನು ಪಡೆಯುವುದು ಉಚಿತ
೧೦.ಮುಖ್ಯವಾಗಿ ಈ ಎಲ್ಲ ಕರ್ಯಗಳನ್ನೂ ಇನ್ನೊ ಚಿಕನ್ ಗುನ್ಯ ಪ್ರವೇಶಿಸದ ಜಿಲ್ಲೆಗಳಲ್ಲಿ ಸಮರೋಪಾದಿಯಲ್ಲಿ ಈಗಲೇ ಕೈಗೊಳ್ಳುವುದರಿಂದ ಮಾತ್ರ ರೋಗ ಎಲ್ಲೆಡೆ ಹರಡುವುದನ್ನು ತಡೆಯಬಹುದು. ಒಮ್ಮೆ ಚಿಕುನ್ ಗುನ್ಯ ಬಂದ ಮೇಲೆ ನಿಯಂತ್ರಣ ಕಷ್ಟ

Post new comment

The content of this field is kept private and will not be shown publicly.
  • Web page addresses and e-mail addresses turn into links automatically.
  • Allowed HTML tags: <a> <em> <strong> <cite> <code> <ul> <ol> <li> <dl> <dt> <dd>
  • Lines and paragraphs break automatically.

More information about formatting options

CAPTCHA
This question is for testing whether you are a human visitor and to prevent automated spam submissions.
2 + 1 =
Solve this simple math problem and enter the result. E.g. for 1+3, enter 4.